ADVERTISEMENT

ಗುಂಡಿನ ಕಾಳಗ: ಇಬ್ಬರು ಕಮಾಂಡೊಗಳು ಹುತಾತ್ಮ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಗುಂಡಿನ ಕಾಳಗ: ಇಬ್ಬರು ಕಮಾಂಡೊಗಳು ಹುತಾತ್ಮ
ಗುಂಡಿನ ಕಾಳಗ: ಇಬ್ಬರು ಕಮಾಂಡೊಗಳು ಹುತಾತ್ಮ   

ಶ್ರೀನಗರ: ಜಮ್ಮು ಕಾಶ್ಮೀರದ ಬಂಡಿಪೊರ ಜಿಲ್ಲೆಯ ಹಾಜಿನ್ ಪ್ರದೇಶದಲ್ಲಿ ಬುಧವಾರ ನಸುಕಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ವಾಯುಪಡೆಯ ಇಬ್ಬರು ಕಮಾಂಡೊಗಳು ಹುತಾತ್ಮರಾಗಿದ್ದಾರೆ. ಅಲ್ಲದೆ ಲಷ್ಕರ್ ಎ–ತೊಯಬಾ ಸಂಘಟನೆಯ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.

ಹಾಜಿನ್‌ನ ರಖ್ (ಪರಿಬಲ್) ಪ್ರದೇಶದಲ್ಲಿ ಉಗ್ರಗಾಮಿಗಳಿರುವ ಸುಳಿವಿನ ಮೇರೆಗೆ ಸೈನಿಕರು ಮತ್ತು ಜಮ್ಮು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡದವರು ಮುಂಜಾನೆ 5 ಗಂಟೆ ವೇಳೆಗೆ ಜಂಟಿಯಾಗಿ ಶೋಧ ಆರಂಭಿಸಿದರು. ಇವರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರಿಂದ ಕಾಳಗ ಆರಂಭವಾಯಿತು.

ಸೈನಿಕರೊಂದಿಗೆ ಕಾರ್ಯಾಚರಣೆ ತರಬೇತಿ ಪಡೆಯುತ್ತಿದ್ದ ವಾಯುಪಡೆಯ ಮೂವರು ಕಮಾಂಡೊಗಳು ಗಾಯಗೊಂಡರು. ಇವರಲ್ಲಿ ಸರ್ಜೆಂಟ್ ನೀಲೇಶ್ ಕುಮಾರ್‌ ನಯನ್ ಮತ್ತು ಕಾರ್ಪೊರಲ್ ಮಿಲಿಂದ್ ಕಿಶೋರ್‌ ಎಂಬುವವರು ನಂತರ ಮೃತಪಟ್ಟರು.

ADVERTISEMENT

ಮಿಲಿಂದ್ ಕಿಶೋರ್‌ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಕ್ರಿ ಪಟ್ಟಣದವರು. ನೀಲೇಶ್ ಕುಮಾರ್ ನಯನ್ ಬಿಹಾರದ ಭಾಗಲ್ಪುರ ಜಿಲ್ಲೆಯ ಉಧಿದಿಹ್ ಗ್ರಾಮದವರು. ಇವರಿಬ್ಬರಿಗೆ ಶ್ರೀನಗರದ ಬಾದಾಮಿಬಾಗ್ ದಂಡು ಪ್ರದೇಶದಲ್ಲಿ ಸೇನೆಯ ವತಿಯಿಂದ ಚಿನಾರ್ ಕೋರ್‌ನ ಕಮಾಂಡರ್ ಜೆ.ಎಸ್. ಸಂಧು ನೇತೃತ್ವದಲ್ಲಿ ಬುಧವಾರ ಸಂಜೆ ಅಂತಿಮ ನಮನ ಸಲ್ಲಿಸಿ ಮೃತದೇಹಗಳನ್ನು ಅವರವರ ಹುಟ್ಟೂರಿಗೆ ಕಳುಹಿಸಲಾಯಿತು.

ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು: ಮೃತ ಭಯೋತ್ಪಾದಕರನ್ನು ಅಬೂಬಕರ್ ಅಲಿ ಬಾಬಾ ಮತ್ತು ನಸ್ರುಲ್ಲಾ ಮಿರ್ ಎಂದು ಗುರುತಿಸಲಾಗಿದೆ. ಅಬೂಬಕರ್ ಪಾಕಿಸ್ತಾನಿ ಉಗ್ರ ಹಾಗೂ ನಸ್ರುಲ್ಲಾ ಸ್ಥಳೀಯ ಉಗ್ರನಾಗಿದ್ದಾನೆ.

ಭದ್ರತಾ ಪಡೆಗಳ ಸಿಬ್ಬಂದಿ ಹಾಗೂ ನಾಗರಿಕರು ಸಾವಿಗೀಡಾದ ಹಲವು ಭಯೋತ್ಪಾದಕ ದಾಳಿಗಳಲ್ಲಿ ಈ ಉಗ್ರರು ಭಾಗಿಯಾಗಿದ್ದರು. ಇವರನ್ನು ಎನ್‌ಕೌಂಟರ್ ಮಾಡಿರುವುದು ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ಎಂದು ಪೊಲೀಸ್ ವರಿಷ್ಠಾಧಿಕಾರಿ (ಡಿಜಿಪಿ) ಎಸ್‌.ಪಿ. ವೈದ್‌ ತಿಳಿಸಿದ್ದಾರೆ. ಸ್ಥಳದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುತಾತ್ಮ ಕಮಾಂಡೊಗಳಿಗೆ ಅಂತಿಮ ನಮನ
ವಾಯುಪಡೆಯ ಹುತಾತ್ಮ ಕಮಾಂಡೊಗಳಿಗೆ ಬಾದಾಮಿಬಾಘ್‌ನಲ್ಲಿರುವ ಸೇನಾಪಡೆಯ ಕೇಂದ್ರಕಚೇರಿಯಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.

‘ಚಿನಾರ್ ಕಾರ್ಪ್ಸ್‌ ಕಮಾಂಡರ್‌ ಹಾಗೂ ಇತರೆ ಎಲ್ಲಾ ಸಿಬ್ಬಂದಿ, ಹುತಾತ್ಮರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ’ ಎಂದು ಸೇನಾಪಡೆ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.