ADVERTISEMENT

ಗೋಲಿಬಾರ್‌ಗೆ ಪತ್ರಕರ್ತ ಬಲಿ

ನಟಿ ಮಾನಭಂಗ ಪ್ರಕರಣ: ಮಣಿಪುರ ಬಂದ್, ಕರ್ಫ್ಯೂ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ಇಂಫಾಲ (ಪಿಟಿಐ): ನಟಿಯ ಮಾನಭಂಗ ಮಾಡಿದ್ದಾನೆ ಎನ್ನಲಾದ ನಾಗಾ ಉಗ್ರನ ಬಂಧನಕ್ಕೆ ಆಗ್ರಹಿಸಿ ಮಣಿಪುರ ಚಿತ್ರೋದ್ಯಮದವರು ಎರಡು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಬಂದ್, ಮುಷ್ಕರ ಭಾನುವಾರ ಹಿಂಸೆಗೆ ತಿರುಗಿ, ಗೋಲಿಬಾರ್‌ಗೆ ಪತ್ರಕರ್ತನೊಬ್ಬ ಬಲಿಯಾಗಿದ್ದಾನೆ.

ಮೃತನನ್ನು ನಾನೊವಾ ಸಿಂಗ್ (29) ಎಂದು ಗುರುತಿಸಲಾಗಿದೆ. ಪೊಲೀಸ್ ವಾಹನವೊಂದಕ್ಕೆ ಬೆಂಕಿ ಹಚ್ಚಿದ ಗುಂಪಿನತ್ತ ಪೊಲೀಸರು ಗೋಲಿಬಾರ್ ನಡೆಸಿದರು.  ಅಲ್ಲಿದ್ದ `ಪ್ರೈಮ್ ನ್ಯೂಸ್' ಪತ್ರಿಕೆಯ ವರದಿಗಾರ ಸಿಂಗ್ ಎದೆಗೆ ಒಂದು ಗುಂಡು ನಾಟಿತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಆತ ಕೊನೆಯುಸಿರೆಳೆದ್ದ್ದಿದ. ನಂತರ ದೇಹವನ್ನು ಮಣಿಪುರ ಪ್ರೆಸ್ ಕ್ಲಬ್‌ಗೆ ಕೊಂಡೊಯ್ಯಲಾಯಿತು.

ಸಿಂಗ್ ಸಾವಿನ ಸುದ್ದಿ ಹರಡುತ್ತಿದ್ದಂತೆಯೇ ಮಣಿಪುರದ ವಿವಿಧ ಕಡೆ, ಪ್ರಮುಖವಾಗಿ ಇಂಫಾಲ ಪೂರ್ವ ಹಾಗೂ ಪಶ್ಚಿಮ ಜಿಲ್ಲೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ನಾಗಾ ಬಂಡುಕೋರ (ಎನ್‌ಎಸ್‌ಸಿಎಂ-ಐಎಂ) ಲಿವಿಂಗ್‌ಸ್ಟೋನ್ ಅನಾಲ್ ಎಂಬಾತ ಇದೇ ತಿಂಗಳು 18ರಂದು ಛಂಡೇಲ್ ಜಿಲ್ಲೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮಣಿಪುರಿ ಚಿತ್ರ ನಟಿ ಮೊಮೊಕೊ ಅವರ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಮತ್ತೆ ನಿಷೇಧಾಜ್ಞೆ: ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂಫಾಲ ಪೂರ್ವ ಹಾಗೂ ಪಶ್ಚಿಮ ಜಿಲ್ಲೆಗಳಲ್ಲಿ 16 ತಾಸುಗಳ ಕಾಲ ಮತ್ತೆ ನಿಷೇಧಾಜ್ಞೆ ವಿಧಿಸಲಾಗಿದೆ.

ಬಂಧನಕ್ಕೆ ಕ್ರಮ: `ಆರೋಪಿಯ ಬಂಧನಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.ಪ್ರತಿಭಟನೆ ಕೈಬಿಡಿ' ಎಂದು ರಾಜ್ಯದ ಗೃಹ ಸಚಿವ ಗೈಖಂಗಾಮ್ ಮನವಿ ಮಾಡಿಕೊಂಡಿದ್ದಾರೆ. `ಮುಖ್ಯಮಂತ್ರಿ ಇಬೊಬಿ ಸಿಂಗ್ ಅವರು ಈ ಸಂಬಂಧ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ' ಎಂದೂ ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.