ಪಣಜಿ (ಐಎಎನ್ಎಸ್): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ವಿವಾದಾತ್ಮಕ ವಿಷಯವು ಗೋವಾದಲ್ಲಿ ನಡೆಯಲಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಲಿರುವ ಆದ್ಯತೆಯ ವಿಷಯವಾಗಿರುವುದಿಲ್ಲ ಎಂದು ಪಕ್ಷದ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ ಗುರುವಾರ ಇಲ್ಲಿ ಹೇಳಿದರು.
ಪಕ್ಷದ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿರುವ ರಾಜ್ಯದ ರಾಜಧಾನಿ ಪಣಜಿಯಲ್ಲಿ ನಖ್ವಿ ಅವರು ವರದಿಗಾರರ ಜೊತೆ ಮಾತನಾಡುತ್ತಿದ್ದರು.
ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಹಾಲಿ ಸರ್ಕಾರದ ದುರಾಡಳಿತ - ಇವು ಪಕ್ಷದ ಮುಂದೆ ಇರುವ ಆದ್ಯತೆಯ ವಿಚಾರಗಳು ಎಂದು ನಖ್ವಿ ನುಡಿದರು. ಪಕ್ಷ ನಾಯಕರು ಅಯೋಧ್ಯಾ ದೇಗುಲ ವಿಚಾರದ ಬಗ್ಗೆ ಮೌನವಾಗಿರುವುದೇಕೆ? ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು 2014ರ ಬದಲಿಗೆ 2013ರಲ್ಲೇ ನಡೆಯಬಹುದೆಂದು ನಿರೀಕ್ಷಿಸಲಾಗಿರುವ ಮುಂಬರುವ ಮಹಾ ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ವ್ಯೂಹ ರೂಪಿಸಬಲ್ಲ ನಾಯಕತ್ವ ಬಗ್ಗೆ ಗಮನ ಹರಿಸುವುದು.
1980-90ರ ದಶಕದಲ್ಲಿ ರಾಷ್ಟ್ರೀಯ ರಾಜಕಾರಣದಲ್ಲಿ ಪಕ್ಷವನ್ನು ಕೇಂದ್ರ ಬಿಂದುವಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಷಯಗಳಲ್ಲಿ ಒಂದಾದ ಅಯೋಧ್ಯಾ ದೇಗುಲ ನಿರ್ಮಾಣದ ಸೈದ್ಧಾಂತಿಕ ಬದ್ಧತೆ ವಿಚಾರದಲ್ಲಿ ಬಿಜೆಪಿಯ ದೃಢ ನಿಲುವು ಹೊಂದಿದೆ ಎಂದೂ ಅವರು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.