ADVERTISEMENT

ಗೋವಾ ಸರ್ಕಾರದ ಪ್ರತಿಕ್ರಿಯೆ ಕೋರಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಗೋವಾ ಸರ್ಕಾರದ ಪ್ರತಿಕ್ರಿಯೆ ಕೋರಿದ ‘ಸುಪ್ರೀಂ’
ಗೋವಾ ಸರ್ಕಾರದ ಪ್ರತಿಕ್ರಿಯೆ ಕೋರಿದ ‘ಸುಪ್ರೀಂ’   

ನವದೆಹಲಿ: ನೆರೆಯ ಕರ್ನಾಟಕದಲ್ಲಿ ಗಣಿಗಾರಿಕೆಯ ಮೇಲಿನ ಮಿತಿಯನ್ನು ಕಡಿತಗೊಳಿಸಿರುವಂತೆ ರಾಜ್ಯದಲ್ಲೂ ಕಡಿತಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಗೋವಾ ಸರ್ಕಾರಕ್ಕೆ ಸೂಚಿಸಿದೆ.

ರಾಜ್ಯದ ಗಣಿಗಳಿಂದ ಕಬ್ಬಿಣದ ಅದಿರನ್ನು ಹೊರತೆಗೆಯುವುದಕ್ಕೆ ಇರುವ ವಾರ್ಷಿಕ 2 ಕೋಟಿ ಮೆಟ್ರಿಕ್‌ ಟನ್‌ ಮಿತಿಯನ್ನು, ಕೂಡಲೇ 1.20 ಕೋಟಿ ಮೆಟ್ರಿಕ್‌ ಟನ್‌ಗೆ ಇಳಿಸಬೇಕು ಎಂದು ಕೋರಿ ಸ್ವಯಂ ಸೇವಾ ಸಂಸ್ಥೆಯಾದ ಗೋವಾ ಪ್ರತಿಷ್ಠಾನ ಅರ್ಜಿ ಸಲ್ಲಿಸಿದೆ.

ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮದನ್‌ ಬಿ.ಲೋಕೂರ್‌ ನೇತೃತ್ವದ ಪೀಠ, 2 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಗಣಿ ಕಂಪೆನಿಗಳಿಗೂ ನಿರ್ದೇಶನ ನೀಡಿದೆ.

ADVERTISEMENT

‘ರಾಜ್ಯದ ಪರಿಸರ ಹಾಗೂ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದನ್ನು ಪರಿಗಣನೆಗೇ ತೆಗೆದುಕೊಳ್ಳದೆ ಗಣಿಗಾರಿಕೆಯ ಮಿತಿಯನ್ನು 2 ಕೋಟಿ ಮೆಟ್ರಿಕ್‌ ಟನ್‌ನಿಂದ 3 ಕೋಟಿ ಮೆಟ್ರಿಕ್‌ ಟನ್‌ಗೆ ಹೆಚ್ಚಿಸಬಹುದು’ ಎಂದು ತಜ್ಞರ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ.

ಆದರೆ, ಎರಡು ವರ್ಷಗಳ ನಿಷೇಧದ ನಂತರ ಪುನಾರಂಭವಾಗಿರುವ ಗಣಿಗಾರಿಕೆಯಿಂದ ಯಾವುದೇ ರೀತಿಯ ದುಷ್ಪರಿಣಾಮ ಹಾಗೂ ಉಲ್ಲಂಘನೆ ಆಗಿಲ್ಲ ಎಂಬುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿಲ್ಲ ಎಂದು ಅರ್ಜಿದಾರರ ಪರ ವಕೀಲ ಪ್ರಶಾಂತ ಭೂಷಣ್‌ ದೂರಿದರು. ಪ್ರಕರಣದ ವಿಚಾರಣೆಯನ್ನು ನವೆಂಬರ್‌ 29ಕ್ಕೆ ಮುಂದೂಡಲಾಗಿದೆ.ಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.