ADVERTISEMENT

ಗೋವಾ: 19 ಗಣಿ ಗುತ್ತಿಗೆ ಪರವಾನಗಿ ರದ್ದತಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಪಣಜಿ (ಪಿಟಿಐ):  ರಾಜ್ಯದಲ್ಲಿರುವ ವನ್ಯಜೀವಿ ಅಭಯಾರಣ್ಯ ಅಥವಾ ರಾಷ್ಟ್ರ ರಕ್ಷಿತಾರಣ್ಯಗಳ 10 ಕಿ.ಮೀ ವ್ಯಾಪ್ತಿಯಲ್ಲಿ 19 ಗಣಿಗಳು ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದ್ದು, ಈ ಗಣಿ ಗುತ್ತಿಗೆಗಳ ಪರವಾನಗಿಯನ್ನು ರದ್ದುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಗೋವಾ ಸರ್ಕಾರ ಶನಿವಾರ ಹೇಳಿದೆ.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ನೀಡಿರುವ ಅಂಕಿ ಅಂಶಗಳನ್ನು ಉಲ್ಲೇಖಿಸಿ ಕರ್ನಾಟಕದ ಅರಣ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಮಾಹಿತಿ ನೀಡಿದೆ ಎಂದು ಗೋವಾ ಅರಣ್ಯ ಸಚಿವ ಫಿಲಿಪ್ ನೆರಿ ರಾಡ್ರಿಗಸ್ ತಿಳಿಸಿದ್ದಾರೆ.

ಗೋವಾ ರಾಜ್ಯದ 19 ಗಣಿಗಳು ಪರಿಸರ ಇಲಾಖೆಯ ಪರವಾನಗಿಯನ್ನು (ಇಸಿ) ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹೇಳಿದೆ.

ಇಸಿಗೆ ಅರ್ಜಿ ಸಲ್ಲಿಸುವಾಗ ಕೆಲವು ಗಣಿ ಗುತ್ತಿಗೆಗಳು ಅರಣ್ಯ ಇಲಾಖೆಗೆ ತಪ್ಪು ಮಾಹಿತಿ ನೀಡಿವೆ ಎಂದು ರಾಡ್ರಿಗಸ್ ಹೇಳಿದ್ದಾರೆ.

ಗೋವಾದಲ್ಲಿ 90ಕ್ಕೂ ಹೆಚ್ಚು ಗಣಿಗಳು ಕಾರ್ಯನಿರ್ವಹಿಸುತ್ತಿವೆ. ವಾರ್ಷಿಕವಾಗಿ ಇವುಗಳು 5.4 ಮೆಟ್ರಿಕ್ ಟನ್ ಅದಿರು ಉತ್ಪಾದಿಸುತ್ತಿದ್ದು, ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.