ADVERTISEMENT

ಘಟನೆ ನಡೆದದ್ದು ಹೇಗೆ?

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 7:40 IST
Last Updated 16 ಜನವರಿ 2011, 7:40 IST

ವಂಡಿಪೆರಿಯಾರ್ (ಕೇರಳ): ಕಾಲ್ತುಳಿತಕ್ಕೆ ಪ್ರಚೋದನೆ ನೀಡಿದ್ದಾದರೂ ಏನೆಂಬ ಪ್ರಶ್ನೆಗೆ ವಿವಿಧ ಬಗೆ ಉತ್ತರ ಸಿಗುತ್ತಿವೆಯೇ ಹೊರತು ನಿಖರ ಕಾರಣ ಮಾತ್ರ ತಿಳಿದು ಬರುತ್ತಿಲ್ಲ.ಮನೆಗೆ ತೆರಳುತ್ತಿದ್ದ ಭಕ್ತ ಸಮೂಹಕ್ಕೆ ಜೀಪೊಂದು ಡಿಕ್ಕಿ ಹೊಡೆಯಿತು. ಆಗ ಕೆಲವರು ಸ್ಥಳದಲ್ಲೇ ಮೃತಪಟ್ಟರು. ಈ ಸಂದರ್ಭದಲ್ಲಿ ಉಂಟಾದ ದಿಗಿಲು ಮತ್ತು ಗದ್ದಲ ನೂಕುನುಗ್ಗಲಿಗೆ ಕಾರಣವಾಯಿತು ಎಂದು ಒಂದು ಮೂಲ ಹೇಳುತ್ತದೆ. ಆದರೆ ರಾಜ್ಯ ಅರಣ್ಯ ಇಲಾಖೆ ವರದಿ ಹೇಳುವುದೇ ಬೇರೆ. ಈ ವರದಿಯ ಪ್ರಕಾರ ದುರಂತ ಸಂಭವಿಸಿದ್ದು ಟ್ಯಾಕ್ಸಿ, ಆಟೊರಿಕ್ಷಾ ಮತ್ತು ಭಕ್ತರ ಮಧ್ಯೆ ಉಂಟಾದ ಸಣ್ಣ ಜಗಳದ ಕಾರಣದಿಂದ.

 ಮಕರ ಜ್ಯೋತಿ ವೀಕ್ಷಣೆಗಾಗಿ ಪುಲ್‌ಮೇಡು ಕಣಿವೆಯಲ್ಲಿ ಭಾರಿ ಜನಸಂದಣಿ ನೆರೆದಿತ್ತು. ಜ್ಯೋತಿ ವೀಕ್ಷಿಸಿದ ಬಳಿಕ ಕೆಲವು ಭಕ್ತರು ವಂಡಿಪೆರಿಯಾರ್‌ಗೆ ಹಿಂದಿರುಗಲು ಆಟೊರಿಕ್ಷಾವನ್ನು ಹತ್ತಿದರು. ರಿಕ್ಷಾ ಚಾಲಕ ಭಕ್ತರನ್ನು ಕರೆದೊಯ್ಯುತ್ತಿದ್ದ  ಜೀಪ್‌ಗಳಿಗಿಂತ ಕಡಿಮೆ ದರ ಪಡೆಯುತ್ತಿದ್ದ. ಈ ವಿಷಯಕ್ಕೆ ಜೀಪ್ ಮತ್ತು ಆಟೊ ಚಾಲಕರ ನಡುವೆ ಜಗಳ ಆರಂಭವಾದಾಗ ಕೆಲ ಭಕ್ತ್ಟ್ಠ ಅದರಲ್ಲಿ ಸೇರಿಕೊಂಡರು. ಆಗ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದಾಗ ಸಿಟ್ಟಾದ ಭಕ್ತರು ಜೀಪಿನ ಕಿಟಕಿ ಗಾಜುಗಳನ್ನು ಒಡೆದು ಹಾಕಿದರು. ಈ ಅಹಿತಕರ ಸನ್ನಿವೇಶದಿಂದ ಸುತ್ತಮುತ್ತ ಇದ್ದ ಭಕ್ತರು ದಿಗಿಲುಗೊಂಡು ಓಡಲಾರಂಭಿಸಿದ್ದು ಕಾಲ್ತುಳಿತಕ್ಕೆ ಕಾರಣವಾಯಿತು.

‘ಇದಕ್ಕೆ ತಕ್ಕಂತೆ ದಿಬ್ಬ ಹತ್ತುವ ರಸ್ತೆ ಸಹ ಕಿರಿದಾಗಿದ್ದು ಅಪಾರ ಪ್ರಮಾಣದಲ್ಲಿ ರಭಸದಿಂದ ಮುನ್ನುಗ್ಗುತ್ತಿದ್ದ ಜನರಿಗೆ ಅದು ಏನೇನೂ ಸಾಲದಾಯಿತು. ಇದ್ದ ಬೆರಳೆಣಿಕೆಯ ಪೊಲೀಸರಿಗೆ ಜನರನ್ನು ನಿರ್ವಹಿಸುವುದು ಅಸಾಧ್ಯವಾಯಿತು’ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.ಇಡುಕ್ಕಿ ಜಿಲ್ಲಾಧಿಕಾರಿ ಅಶೋಕ್ ಕುಮಾರ್ ಸಿಂಗ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ, ಕಿರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಜೀಪೊಂದು ಆಟೊರಿಕ್ಷಾಗೆ ಡಿಕ್ಕಿ ಹೊಡೆಯಿತು. ಆಗ ಎರಡೂ ವಾಹನಗಳು ಭಕ್ತರ ಮೇಲೆ ಹರಿದವು. ಇದರಿಂದ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದವರು ಮತ್ತು ಸಣ್ಣ ವಾಹನಗಳಲ್ಲಿ ತೆರಳುತ್ತಿದ್ದ ಸಾವಿರಾರು ಜನ ಭೀತರಾಗಿ ಓಡಲಾರಂಭಿಸಿದರು. ಮಂಜು ಮತ್ತು ಕತ್ತಲು ಪರಿಸ್ಥಿತಿಯನ್ನು ಇನ್ನಷ್ಟು ಭೀಕರ ಮಾಡಿತು.

ಅಧಿಕಾರಿಯೊಬ್ಬರ ಹೇಳಿಕೆಯ ಪ್ರಕಾರವಂತೂ ಜೀಪ್ ಮತ್ತು ಆಟೊರಿಕ್ಷಾ ನಡುವೆ 80 ಜನ ನಜ್ಜುಗುಜ್ಜಾದರು!ವಾಹನಗಳನ್ನು ನಿಯಂತ್ರಿಸಲು ಕಟ್ಟಿದ್ದ ಸರಪಳಿಯನ್ನು ಭಕ್ತರು ಕತ್ತಲಿನಲ್ಲಿ ಕಾಣದೆ ತುಳಿದರು. ಆಗ ಯದ್ವಾತದ್ವಾ ನಿಲ್ಲಿಸಿದ್ದ ವಾಹನಗಳ ಮೇಲೆ ಜನ ಬಿದ್ದಾಗ ಕಾಲ್ತುಳಿತ ಸಂಭವಿಸಿತು ಎಂಬುದು ಕೆಲ ಸ್ಥಳೀಯರ ಹೇಳಿಕೆ.ಈ ನೆಪ ಮಾತ್ರದ ಕಾರಣಗಳು ಏನೇ ಇದ್ದರೂ ಇಡೀ ದುರ್ಘಟನೆಯಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ಸಂಘಟಿಸದ ಅಧಿಕಾರಿಗಳ ವೈಫಲ್ಯವಂತೂ ಎದ್ದು ಕಾಣುತ್ತದೆ.

ಕಳೆದ ವರ್ಷ ಮಕರ ಜ್ಯೋತಿ ವೀಕ್ಷಣೆಗೆ 1.5 ಲಕ್ಷ ಜನ ಸೇರಿದ್ದರೆ ಈ ವರ್ಷ ಈ ಸಂಖ್ಯೆ 3 ಲಕ್ಷ ದಾಟಿತ್ತು. ಅದಕ್ಕೆ ತಕ್ಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆಡಳಿತಕ್ಕೆ ಸಾಧ್ಯವಾಗಿರಲಿಲ್ಲ. ‘ಪುಲ್‌ಮೇಡುವಿನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ಅಚ್ಯುತಾನಂದನ್ ಸರ್ಕಾರ ವಿಫಲವಾಯಿತು’ ಎಂದು ರಾಜ್ಯದ ವಿರೋಧ ಪಕ್ಷದ ನಾಯಕ ಉಮ್ಮನ್ ಚಾಂಡಿ ಆರೋಪಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸುವಂತೆ ಅವರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.