ADVERTISEMENT

ಚಿದಂಬರಂ ಪುತ್ರ ಕಾರ್ತಿ ಬಂಧನ

ಪಿಟಿಐ
Published 1 ಮಾರ್ಚ್ 2018, 5:54 IST
Last Updated 1 ಮಾರ್ಚ್ 2018, 5:54 IST
ಕಾರ್ತಿ ಅವರನ್ನು ಕೋರ್ಟ್‌ಗೆ ಕರೆದೊಯ್ದ ಪೊಲೀಸರು –ಪಿಟಿಐ ಚಿತ್ರ
ಕಾರ್ತಿ ಅವರನ್ನು ಕೋರ್ಟ್‌ಗೆ ಕರೆದೊಯ್ದ ಪೊಲೀಸರು –ಪಿಟಿಐ ಚಿತ್ರ   

ನವದೆಹಲಿ : ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಮಗ ಕಾರ್ತಿ ಅವರನ್ನು ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಬುಧ
ವಾರ ಬೆಳಗ್ಗೆ ಚೆನ್ನೈಯಲ್ಲಿ ಬಂಧಿಸಿದೆ.

ಲಂಡನ್‌ನಿಂದ ಹಿಂದಿರುಗಿದ ಕಾರ್ತಿ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿಯೇ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದರು. ಅಗತ್ಯ ಪ್ರಕ್ರಿಯೆಗಳ ಬಳಿಕ ಕಾರ್ತಿಯವರನ್ನು ದೆಹಲಿಗೆ ಕರೆದೊಯ್ದು, ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸುಮೀತ್‌ ಆನಂದ್‌ ಅವರ ಮುಂದೆ ಹಾಜರುಪಡಿಸಲಾಯಿತು. ಕಾರ್ತಿ ತನಿಖೆಗೆ ಸಹಕರಿಸುತ್ತಿಲ್ಲ. ಹಾಗಾಗಿ 15 ದಿನ ಅವರನ್ನು ಕಸ್ಟಡಿಗೆ ನೀಡಬೇಕು ಎಂದು ಸಿಬಿಐ ಕೋರಿತು. ಆದರೆ ಅವರನ್ನು ಒಂದು ದಿನದ ಮಟ್ಟಿಗೆ ಸಿಬಿಐ ವಶಕ್ಕೆ ನೀಡಲಾಗಿದೆ.

ವಿಚಾರಣೆಗಾಗಿ ಕಾರ್ತಿ ಅವರಿಗೆ ಸಿಬಿಐ ಹಲವು ಬಾರಿ ನೋಟಿಸ್‌ ನೀಡಿತ್ತು. ಆದರೆ ವಿವಿಧ ನ್ಯಾಯಾಲಯಗಳಿಂದ ಅದಕ್ಕೆ ಅವರು ತಡೆಯಾಜ್ಞೆ ತಂದಿದ್ದರು. ಚಿದಂಬರಂ ಮತ್ತು ಅವರ ಸಹವರ್ತಿಗಳಿಗೆ ಸೇರಿದ ಸ್ಥಳಗಳಲ್ಲಿ ಹಲವು ಬಾರಿ ಇ.ಡಿ. ಶೋಧ ನಡೆಸಿತ್ತು.

ADVERTISEMENT

ಲಂಚ ಪಡೆದ ಹಣವನ್ನು ಕಾರ್ತಿ ಅವರು ವಿದೇಶಗಳ ಖಾತೆಗಳಲ್ಲಿ ಇರಿಸಿದ್ದಾರೆ. ವಿದೇಶಕ್ಕೆ ಹೋಗಿ ಈ ಖಾತೆಗಳನ್ನು ಕಾರ್ತಿ ಮುಚ್ಚುವ ಸಾಧ್ಯತೆ ಇದೆ ಎಂಬ ಆಪಾದನೆಯಿಂದಾಗಿ ಅವರ ವಿರುದ್ಧ ಲುಕ್‌ಔಟ್‌ ನೋಟಿಸ್‌ (ವಿದೇಶ ಪ್ರವಾಸಕ್ಕೆ ನಿರ್ಬಂಧ) ಹೊರಡಿಸಲಾಗಿತ್ತು. ಆದರೆ, ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಮಗಳನ್ನು ಸೇರಿಸುವುದಕ್ಕಾಗಿ ಲಂಡನ್‌ಗೆ ಹೋಗುವುದಕ್ಕೆ ಕಾರ್ತಿಗೆ ಸುಪ್ರೀಂ ಕೋರ್ಟ್‌ ಅವಕಾಶ ಕೊಟ್ಟಿತ್ತು.

ಕಾರ್ತಿ ‘ಪರೋಕ್ಷವಾಗಿ’ ಮಾಲೀಕರಾಗಿರುವ ಅಡ್ವಾಂಟೇಜ್‌ ಕನ್ಸಲ್ಟಿಂಗ್‌ ಪ್ರೈ. ಲಿ.ಗೆ ಎಫ್‌ಐಪಿಬಿ ಅನುಮೋದನೆಗೆ ಸಂಬಂಧಿಸಿ ಐಎನ್‌ಎಕ್ಸ್‌ ಮೀಡಿಯಾವು ₹10 ಲಕ್ಷ ನೀಡಿದ್ದಾಗಿ ದಾಖಲೆಗಳು ಸ್ಪಷ್ಟವಾಗಿ ಹೇಳುತ್ತಿವೆ ಎಂದು ಸಿಬಿಐ ವಾದಿಸುತ್ತಿದೆ. ಹಾಗೆಯೇ, ಅವರು ‘ನೇರವಾಗಿ ಅಥವಾ ಪರೋಕ್ಷವಾಗಿ’ ಗಣನೀಯ ಹಿತಾಸಕ್ತಿ ಹೊಂದಿರುವ ಕಂಪನಿಗಳ ಹೆಸರಿಗೆ ಐಎನ್‌ಎಕ್ಸ್‌ ಮೀಡಿಯಾದಿಂದ ₹3.5 ಕೋಟಿನೀಡಲಾಗಿದೆ ಎಂದು ಸಿಬಿಐ
ಎಫ್‌ಐಆರ್‌ ಹೇಳುತ್ತಿದೆ. ‘ಮೂಲ’ಗಳನ್ನು ಉಲ್ಲೇಖಿಸಿ ಈ ಆಪಾದನೆ ಮಾಡಲಾಗಿದೆ ಎಂದು ಸಿಬಿಐ ಹೇಳಿದೆ.

ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಐಎನ್‌ಎಕ್ಸ್‌ ಮೀಡಿಯಾವು ಕಾರ್ತಿ ಜತೆ ಸೇರಿ ಷಡ್ಯಂತ್ರ ಮಾಡಿದೆ. ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದುದರಿಂದ ಹಣಕಾಸು ಸಚಿವಾಲಯದ ಅಧಿಕಾರಿಗಳ ಮೇಲೆ ಕಾರ್ತಿ ಪ್ರಭಾವ ಬೀರಿದ್ದಾರೆ ಎಂದೂ ಸಿಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.