ADVERTISEMENT

ಚೀನಾ ಅನುಚಿತ ವರ್ತನೆ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ನವದೆಹಲಿ / ಬೀಜಿಂಗ್(ಪಿಟಿಐ): ಶಾಂಘೈನಲ್ಲಿರುವ ಭಾರತೀಯ ರಾಜತಾಂತ್ರಿಕರೊಬ್ಬರು ಸ್ಥಳೀಯ ಅಧಿಕಾರಿಗಳ ಅನುಚಿತ ವರ್ತನೆಯಿಂದಾಗಿ ಕೋರ್ಟ್ ಸಭಾಂಗಣದಲ್ಲಿ ತಲೆಸುತ್ತಿ ಬಿದ್ದು ಆಸ್ಪತ್ರೆ ಸೇರಬೇಕಾಗಿ ಬಂದಿದ್ದು, ಈ ಬಗ್ಗೆ ಭಾರತ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಈ ಸಂಬಂಧ ಬೀಜಿಂಗ್, ಶಾಂಘೈ ಮತ್ತು ನವದೆಹಲಿಗಳಲ್ಲಿ ಚೀನಾ ಅಧಿಕಾರಿಗಳಿಗೆ ದೂರು ದಾಖಲಿಸಿದೆ.

ಪ್ರಕರಣದ ಹಿನ್ನೆಲೆ: ಭಾರತೀಯ ವ್ಯಾಪಾರಿಗಳಿಬ್ಬರ ಅಪಹರಣ ಪ್ರಕರಣದ ವಿಚಾರಣೆಗೆಂದು ರಾಜತಾಂತ್ರಿಕ ಎಸ್.ಬಾಲಚಂದ್ರನ್ (46) ಅವರು ಕಳೆದ ಡಿಸೆಂಬರ್ 31ರಂದು ಶಾಂಘೈ ಸನಿಹದ ಯಿವು ನಗರದ ಕೋರ್ಟ್‌ಗೆ ತೆರಳಿದ್ದರು. ಮಧುಮೇಹ ಇರುವ ಕಾರಣ ತಾವು ವಿಚಾರಣೆ ಪೂರ್ಣಗೊಳ್ಳುವ ತನಕ ಕೋರ್ಟ್‌ನಲ್ಲಿ ಇರಲು ಸಾಧ್ಯವಿಲ್ಲ ಎಂದು ಅವರು ನಿರ್ಗಮಿಸಲು ಮುಂದಾದಾಗ ಅಧಿಕಾರಿಗಳು ಅವರನ್ನು ತಡೆದರು. ನಿತ್ರಾಣಗೊಂಡ ಬಾಲಚಂದ್ರನ್ ತಲೆಸುತ್ತಿ ಬಿದ್ದರು. ಕೊನೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಲಾಗಿದೆ.
ಭಾರತದಲ್ಲಿರುವ ಚೀನಾ ಆಯೋಗದ ಉಪ ಮುಖ್ಯಸ್ಥ ಝಾಂಗ್ ಯು ಅವರನ್ನು ಕರೆಸಿಕೊಂಡ ವಿದೇಶಾಂಗ ವ್ಯವಹಾರ ಸಚಿವಾಲಯ, ರಾಜತಾಂತ್ರಿಕರನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಹೇಳಿದೆ.

`ಈ ಪ್ರಕರಣವನ್ನು ನಾವು ಸೂಕ್ತವಾಗಿ ನಿರ್ವಹಿಸುತ್ತೇವೆ~ ಎಂದು ಝಾಂಗ್ ಪ್ರತಿಕ್ರಿಯಿಸಿದ್ದಾರೆ. `ಘಟನೆಯ ಬಗ್ಗೆ ನಾನು ವಿದೇಶಾಂಗ ವ್ಯವಹಾರ ಸಚಿವಾಲಯದಿಂದ ಈಗಷ್ಟೇ ವಿವರ ಪಡೆದೆ. ಕೋರ್ಟ್‌ನಲ್ಲಿ ನಿಜವಾಗಿಯೂ ಏನು ನಡೆಯಿತು ಎನ್ನುವುದನ್ನು ತಿಳಿದುಕೊಳ್ಳುತ್ತೇನೆ~ ಎಂದೂ ಝಾಂಗ್ ಹೇಳಿದ್ದಾರೆ.

ಶಾಂಘೈನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಭಾರತೀಯ ರಾಯಭಾರ ಕಚೇರಿಯೂ ಚೀನಾ ವಿದೇಶಾಂಗ ಸಚಿವಾಲಯಕ್ಕೆ ದೂರು ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ವರ್ತಕರಾದ ದೀಪಕ್ ರಹೇಜಾ ಹಾಗೂ ಶ್ಯಾಂಸುಂದರ್ ಅಗರ್‌ವಾಲ್ ಅವರ ಬಿಡುಗಡೆಗಾಗಿ ಪ್ರಯತ್ನಿಸಿದ ವೇಳೆ ಬಾಲಚಂದ್ರನ್ ತಲೆಸುತ್ತಿ ಬಿದ್ದರು ಎಂದು ಶಾಂಘೈನಲ್ಲಿರುವ ಭಾರತೀಯ ಕಾನ್ಸುಲ್ ಜನರಲ್ ರವಿ ಗಂಗೂಲಿ ದಾಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬಾಕಿ ಪಾವತಿಸದ ಕಾರಣ ಎರಡು ವಾರಗಳ ಹಿಂದೆ ದೀಪಕ್ ಹಾಗೂ ಶ್ಯಾಂಸುಂದರ್ ಅವರನ್ನು ಸ್ಥಳೀಯ ವರ್ತಕರು ಒತ್ತೆ ಇರಿಸಿಕೊಂಡಿದ್ದರು. ಬಾಲಚಂದ್ರನ್ ಅವರು ಕೋರ್ಟ್‌ನಲ್ಲಿ ಇವರ ಬಿಡುಗಡೆಗೆ ಸುಮಾರು ಐದು ತಾಸುಗಳ ಕಾಲ ಸಂಧಾನ ನಡೆಸಿದ್ದರು. ಪೊಲೀಸ್ ಹಾಗೂ ನ್ಯಾಯಾಧೀಶರ ಸಮ್ಮುಖದಲ್ಲಿ ಈ ಘಟನೆ ನಡೆಯಿತು ಎಂದು ಅವರು ಹೇಳಿದ್ದಾರೆ.

ಬಾಲಚಂದ್ರನ್ ಅವರ ಜತೆ ತೆರಳುತ್ತಿದ್ದ ದೀಪಕ್ ಹಾಗೂ ಶ್ಯಾಂಸುಂದರ್ ಅವರನ್ನು ಗುಂಪೊಂದು ಎಳೆಯಲು ಪ್ರಯತ್ನಿಸಿತು. ಈ ಹಂತದಲ್ಲಿ ಬಾಲಚಂದ್ರನ್ ತಲೆಸುತ್ತಿ ಬಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರ ಆರೋಗ್ಯ ಸುಧಾರಿಸಿದೆ. ಅವರನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಸ್ಥಳೀಯ ಅಧಿಕಾರಿಗಳು ಬಾಲಚಂದ್ರನ್ ಅವರ ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT