ADVERTISEMENT

ಚೀನಾ ಗಡಿಯಲ್ಲಿ ಗಸ್ತು ಬಿಗಿ

ದೋಕಲಾ ಬಿಕ್ಕಟ್ಟು ಮರುಕಳಿಸದಂತೆ ಎಚ್ಚರಿಕೆಯ ಕ್ರಮ

ಪಿಟಿಐ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಲಾಂಗ್ (ಅರುಣಾಚಲ ಪ್ರದೇಶ) : ದೋಕಲಾ ಬಿಕ್ಕಟ್ಟಿನಿಂದ ಎಚ್ಚೆತ್ತುಕೊಂಡಿರುವ ಭಾರತೀಯ ಸೇನಾಪಡೆ, ಚೀನಾ ಗಡಿಯ ಬೇರೆ ಪ್ರದೇಶಗಳಲ್ಲಿ ಇಂತಹದೇ ಪರಿಸ್ಥಿತಿ ಮರುಕಳಿಸುವುದನ್ನು ತಡೆಯಲು ಕ್ರಮ ಕೈಗೊಂಡಿದೆ. ಅರುಣಾಚಲ ಪ್ರದೇಶದ ವಲಾಂಗ್‌ ಸಮೀಪ ಇರುವ ಭಾರತ–ಚೀನಾ–ಮ್ಯಾನ್ಮಾರ್‌ ದೇಶಗಳ ಗಡಿಗಳು ಸೇರುವ ಪ್ರದೇಶದಲ್ಲಿ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿದೆ.

‘ಮೂರು ದೇಶಗಳು ಸೇರುವ ಪ್ರದೇಶದಲ್ಲಿ ಹೆಚ್ಚು ಯೋಧರನ್ನು ನಿಯೋಜನೆ ಮಾಡಲಾಗಿದೆ. ಗಡಿಗೆ ಸಮೀಪದಲ್ಲಿರುವ ಗುಡ್ಡಗಾಡು ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಈ ಪ್ರದೇಶ ಭಾರತಕ್ಕೆ ಅತಿ ಮುಖ್ಯ’ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸಿಕ್ಕಿಂನಲ್ಲಿರುವ ದೋಕಲಾದ ನಂತರ ಚೀನಾ–ಭಾರತ ಗಡಿಗೆ ಹೊಂದಿಕೊಂಡಂತೆ ಇರುವ ಪ್ರದೇಶಗಳಲ್ಲಿ ವಲಾಂಗ್ ಪ್ರಮುಖವಾದುದಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಮೂರು ದೇಶಗಳ ಗಡಿಗಳು ಸಂಧಿಸುವ ಪ್ರದೇಶದಲ್ಲಿ ಮಾತ್ರವಲ್ಲದೆ ಸಮೀಪದ ಲೋಹಿತ್ ನದಿ ಕಣಿವೆಯಲ್ಲಿಯೂ ಯೋಧರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಭಾರತ–ಚೀನಾ–ಮ್ಯಾನ್ಮಾರ್ ದೇಶಗಳು ಸೇರುವ ಈ ಪ್ರದೇಶ, ದೇಶದ ಪೂರ್ವ ತುದಿಯಲ್ಲಿರುವ ವಲಾಂಗ್‌ನಿಂದ 50 ಕಿ.ಮೀ. ದೂರದಲ್ಲಿದೆ. 1962ರ ಚೀನಾ–ಭಾರತ ಯುದ್ಧದಲ್ಲಿ ಭಾರತೀಯ ಸೇನೆಯ ಶೌರ್ಯಪ್ರದರ್ಶನಕ್ಕೆ ವಲಾಂಗ್  ಸಾಕ್ಷಿಯಾಗಿತ್ತು.

ಚೀನಾ–ಮ್ಯಾನ್ಮಾರ್ ಬಾಂಧವ್ಯ ಕಾರಣ: ಚೀನಾ ಮತ್ತು ಮ್ಯಾನ್ಮಾರ್ ನಡುವೆ ಸೇನಾ ಬಾಂಧವ್ಯ ಗಾಢಗೊಳ್ಳುತ್ತಿರುವುದು ಸಹ, ಭಾರತ ಇಲ್ಲಿ ತನ್ನ ಇರುವಿಕೆ ಹೆಚ್ಚಿಸಲು ಕಾರಣ.

ಮ್ಯಾನ್ಮಾರ್‌ನ ಗಡಿ ರಕ್ಷಣಾ ಪಡೆ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿಲ್ಲ. ಚೀನಾಪಡೆಗಳು ಈ ಪ್ರದೇಶ ಪ್ರವೇಶಿಸುವುದು ಕಡಿಮೆ. ಆದರೆ ಇಲ್ಲಿಗೆ ಸಮೀಪದಲ್ಲಿ ರಸ್ತೆಯೊಂದನ್ನು ನಿರ್ಮಿಸಿದ್ದು, ಚೀನಾದ ಸೇನಾ ಸಿಬ್ಬಂದಿ ಸಂಚಾರಕ್ಕೆ ಇದು ನೆರವಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಚೀನಾ ರಸ್ತೆ ನಿರ್ಮಾಣ ತಡೆದಿದ್ದ ಭಾರತ: ವಿವಾದಿತ ಗಡಿ ಪ್ರದೇಶದಲ್ಲಿ ಚೀನಾ ಸೈನಿಕರು ಕಳೆದ ವರ್ಷ ರಸ್ತೆ ನಿರ್ಮಿಸಿದ್ದರು. ಭಾರತದ ಸುರಕ್ಷತೆಗೆ ಇದು ಬೆದರಿಕೆ ಒಡ್ಡಬಹುದು ಎಂಬ ಕಾರಣಕ್ಕೆ ಭಾರತೀಯ ಸೇನಾಪಡೆ ಇದನ್ನು ತಡೆದಿತ್ತು. ಇದರಿಂದಾಗಿ ಎರಡೂ ದೇಶಗಳ ಸೈನಿಕರು ಜೂನ್‌ 16ರಿಂದ 73 ದಿನಗಳ ಕಾಲ ದೋಕಲಾದಲ್ಲಿ ಮುಖಾಮುಖಿಯಾಗಿದ್ದರು. ಆಗಸ್ಟ್ 28ರಂದು ಈ ಬಿಕ್ಕಟ್ಟು ಕೊನೆಯಾಗಿತ್ತು. ಚೀನಾ ರಸ್ತೆ ನಿರ್ಮಿಸಲು ಯತ್ನಿಸಿದ್ದ ಈ ಸ್ಥಳದ ಮೇಲೆ ಚೀನಾ ಮತ್ತು ಭೂತಾನ್‌ ದೇಶಗಳೆರಡೂ ಹಕ್ಕುಸಾಧಿಸುತ್ತಿವೆ.
**

ಯುದ್ಧಕ್ಕೆ ತಾಲೀಮು
‘ಯುದ್ಧ ಎದುರಿಸಲು ನಿಯಮಿತವಾಗಿ ತಾಲೀಮು ಮಾಡುತ್ತಿದ್ದೇವೆ. ಸುರಕ್ಷಿತವಾಗಿರುವ ಸಲುವಾಗಿ, ಆಕ್ರಮಣಕಾರಿ ಸ್ಥಿತಿಯಲ್ಲಿ ಇರಬೇಕಾಗುತ್ತದೆ’ ಎಂದು ಸೇನಾಧಿಕಾರಿ ಹೇಳಿದ್ದಾರೆ.

ಉತ್ತರ ದೋಕಲಾದಲ್ಲಿ ಚೀನಾ ತನ್ನ ಸೇನಾಪಡೆ ನಿಯೋಜಿಸಿದ್ದು, ಈ ಭಾಗದಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸುತ್ತಲೇ ಇದೆ ಎಂದು ಮೂಲಗಳು ಹೇಳಿವೆ.

ಪಾಕಿಸ್ತಾನದ ಜತೆಗಿನ ಗಡಿ ಕುರಿತು ಹೊಂದಿರುವ ಗಮನವನ್ನು ಚೀನಾ ಗಡಿಗೆ ವರ್ಗಾಯಿಸಬೇಕಾದ ಸಮಯ ಬಂದಿದೆ ಎಂದು ಸೇನಾಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಇತ್ತೀಚೆಗೆ ‍ಹೇಳಿದ್ದರು. ಈ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಸೂಕ್ಷ್ಮವಾಗಿ ತಿಳಿಸಿದ್ದರು.

ಚೀನಾವು ದೋಕಲಾ ಸಮೀಪ ಹೆಲಿಪ್ಯಾಡ್‌, ಸೇನಾ ನೆಲೆ, ಕಾಲುವೆಗಳನ್ನು ನಿರ್ಮಿಸುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ತಿಂಗಳು ಹೇಳಿದ್ದರು.
**
ಗುಡ್ಡಗಾಡು ಮಾರ್ಗಗಳ ಮೇಲೆ ನಿಯಂತ್ರಣ
‘ಈ ಪ್ರದೇಶದಲ್ಲಿ 18 ಗುಡ್ಡಗಾಡು ಮಾರ್ಗಗಳಿವೆ. ಈ ಮಾರ್ಗಗಳಲ್ಲಿ ಸಂಚಾರ ಸಾಧ್ಯ ಇದೆ. ಹಾಗಾಗಿ ದೇಶದ ಭದ್ರತೆ ದೃಷ್ಟಿಯಿಂದ ಈ ರಸ್ತೆಗಳ ಮೇಲೆ ನಿಯಂತ್ರಣ ಹೊಂದುವುದು ಬಹಳ ಮುಖ್ಯ’ ಎಂದು ಸೇನಾಧಿಕಾರಿ ಹೇಳಿದ್ದಾರೆ.

ಭಾರತದ ಜತೆ 4,000 ಕಿ.ಮೀ. ಉದ್ದಕ್ಕೆ ಹೊಂದಿರುವ ಗಡಿಯಲ್ಲಿ ಚೀನಾ ಹೊಸದಾಗಿ ರಸ್ತೆಗಳನ್ನು ನಿರ್ಮಿಸುವುದು ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವುದನ್ನು ಮಾಡುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.