ADVERTISEMENT

ಚುನಾವಣಾ ಅಪರಾಧವಾಗಿ ಪರಿಗಣಿಸಿ

‘ಕಾಸಿಗಾಗಿ ಸುದ್ದಿ’: ಆಯೋಗ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:30 IST
Last Updated 5 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿ ಯಾದ ಬೆನ್ನಲ್ಲೇ, ಮಾಧ್ಯಮ­ಗಳು ‘ಕಾಸಿಗಾಗಿ ಸುದ್ದಿ’ ಪ್ರಕಟಿಸುವುದನ್ನು ಚುನಾವಣಾ ಅಪರಾಧವಾಗಿ ಪರಿಗಣಿಸಬೇಕು ಎಂದು ಆಯೋಗ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಚುನಾವಣಾ ವೇಳಾಪಟ್ಟಿ ಘೋಷಣೆ ಗಾಗಿ ಬುಧವಾರ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್, ‘ಕಾಸಿಗಾಗಿ ಸುದ್ದಿ’ ಪ್ರಕಟಿಸುವುದನ್ನು ನಿಯಂತ್ರಿಸಲು ಯಾವುದೇ ಕಾನೂನು ಇಲ್ಲ. ಹಾಗಾಗಿ ಇದನ್ನು ಚುನಾವಣಾ ಅಪರಾಧ ಎಂದು ಪರಿಗಣಿಸಬೇಕು ಎಂದು ನಾವು ಕಾನೂನು ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದರು.

‘ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಹಾಗೂ ಅಭ್ಯರ್ಥಿಗಳ ವೆಚ್ಚ... ಈ ಮೂರು ಅಂಶಗಳನ್ನು ‘ಕಾಸಿಗಾಗಿ ಸುದ್ದಿ’ ಒಳಗೊಂಡಿದೆ’ ಎಂದು ಅವರು ವಿಶ್ಲೇಷಿಸಿದರು.

‘ನಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ನಿಯಂತ್ರಣಗಳನ್ನು ನಾವು ಕೈಗೊಳ್ಳುತ್ತಿದ್ದೇವೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಆಯೋಗ ಕಣ್ಣಿಟ್ಟಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಗಳ ಮೂಲಕ ಈ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ’ ಎಂದರು.

‘ಕಾಸಿಗಾಗಿ ಸುದ್ದಿ’ಗೆ ಸಂಬಂಧಿಸಿದ ದೂರುಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿ ಯಿಸಿದ ಸಂಪತ್, ‘ಮುದ್ರಣ ಮಾಧ್ಯಮದ ವಿರುದ್ಧ ಬಂದಿರುವ ದೂರುಗಳನ್ನು ‘ಭಾರತೀಯ ಪತ್ರಿಕಾ ಮಂಡಳಿ’ (ಪಿಸಿಐ) ಹಾಗೂ ವಿದ್ಯು­ನ್ಮಾನ ಮಾಧ್ಯಮದ ವಿರುದ್ಧದ ದೂರು­ಗಳನ್ನು ‘ರಾಷ್ಟ್ರೀಯ  ಪ್ರಸಾರಕರ ಸಂಘ’ದ (ಎನ್‌ಬಿಎ) ಗಮನಕ್ಕೆ ತರಲಾಗಿದೆ’ ಎಂದರು.

ಸಂಸತ್ ನಿರ್ಧಾರಕ್ಕೆ: ‘ಜನಾಭಿಪ್ರಾಯ ಸಮೀಕ್ಷೆ’ಗೆ ಸಂಬಂಧಿಸಿದ ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ಸಂಪತ್, ‘ನಮ್ಮ ಅಧಿಕಾರವನ್ನು ಬಳಸುವುದಕ್ಕೆ ನಾವು ಹಿಂಜರಿಯುವುದಿಲ್ಲ. ಆದರೆ, ಈ ಕುರಿತು ನಿರ್ಧಾರವನ್ನು  ಸಂಸತ್‌ ಕೈಗೊಳ್ಳಬೇಕಿದೆ’ ಎಂದು ತಿಳಿಸಿದರು.
‘ಚುನಾವಣೆ ಸಂದರ್ಭದಲ್ಲಿ ಮತ ದಾರರ ಮೇಲೆ ಪ್ರಭಾವ ಬೀರುವಂತಹ ಇಂತಹ ಸಮೀಕ್ಷೆಗಳನ್ನು ನಿಷೇಧಿಸ ಬೇಕೆಂಬ ಒತ್ತಾಯ 2004ರಲ್ಲೇ ಕೇಳಿ ಬಂದಿತ್ತು.  ಆದರೆ, ‘ಮತಗಟ್ಟೆ ಸಮೀಕ್ಷೆ’ ಯನ್ನು ಮಾತ್ರ ನಿಷೇಧಿಸಲಾಯಿತು’ ಎಂದು ಅವರು ಗಮನ ಸೆಳೆದರು.

ಯಾರೂ ಬೇಕಾದರೂ ದೂರು ನೀಡಬಹುದು
‘ಸುಳ್ಳು ಪ್ರಮಾಣ ಪತ್ರ ನೀಡುವ ಅಭ್ಯರ್ಥಿಗಳ ವಿರುದ್ಧ ಚುನಾವಣಾಧಿಕಾರಿ ಅಥವಾ ಸಾರ್ವಜನಿಕರು ಕ್ರಮ ಕೈಗೊಳ್ಳುವಂತೆ ದೂರು ನೀಡಬಹುದು‘ ಎಂದು ಸಂಪತ್ ಇದೇ ವೇಳೆ ತಿಳಿಸಿದರು.

‘ಸದ್ಯದ ಕಾನೂನಿನ ಪ್ರಕಾರ, ಸುಳ್ಳು ಪ್ರಮಾಣ ಪತ್ರ ನೀಡುವವರ ವಿರುದ್ಧದ ಆರೋಪ ಸಾಬೀತಾದಲ್ಲಿ ಅಂತಹವರು ಆರು ತಿಂಗಳು ಜೈಲು ಶಿಕ್ಷೆ ಮತ್ತು ದಂಡ ಪಾವತಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.