ADVERTISEMENT

ಜಂಗೀಪುರ: ರಾಷ್ಟ್ರಪತಿ ಪುತ್ರ ಅಭಿಜಿತ್ ಮುಖರ್ಜಿಗೆ ಅಲ್ಪ ಅಂತರದ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 9:15 IST
Last Updated 13 ಅಕ್ಟೋಬರ್ 2012, 9:15 IST

ಬೆಹ್ರಾಂಪೋರ್ (ಪಿಟಿಐ): ಪಶ್ಚಿಮ ಬಂಗಾಳದ ಜಂಗೀಪುರ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಅಭ್ಯರ್ಥಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಅತ್ಯಲ್ಪ ಅಂತರದಲ್ಲಿ ಗೆದ್ದುಕೊಂಡಿದ್ದಾರೆ.

ಜಂಗೀಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅಭಿಜಿತ್ ಮುಖರ್ಜಿ ಅವರು 2536 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಅವರು ತಮ್ಮ ಸಮೀಪಸ್ಪರ್ಧಿ ಸಿಪಿಐ- ಎಂ ಅಭ್ಯರ್ಥಿ ಮುಜಾಫರ್ ಹುಸೇನ್ ಅವರನ್ನು ಪರಾಭವಗೊಳಿಸಿದ್ದಾರೆ.

ಅಭಿಜಿತ್ ಮುಖರ್ಜಿ ಅವರಿಗೆ 3,32,919 ಮತಗಳು ಲಭಿಸಿದರೆ, ಮುಜಾಫರ್ ಹುಸೇನ್ ಅವರಿಗೆ 3,30,383 ಮತಗಳು ಲಭಿಸಿವೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಬಿಜೆಪಿ ಅಭ್ಯರ್ಥಿ ಸುಧಾಂಗ್ಶು ಬಿಸ್ವಾಸ್ ಮೂರನೇ ಸ್ಥಾನದಲ್ಲಿದ್ದು 85,867 ಮತಗಳನ್ನು ಗಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ರೈಸುದ್ದೀನ್ ಮತ್ತು ತಹೆದುಲ್ ಇಸ್ಲಾಂ ಕ್ರಮವಾಗಿ 41,620 ಮತ್ತು 24,691 ಮತಗಳನ್ನು ಗಳಿಸಿದ್ದಾರೆ.

ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಅಂತ್ಯಗೊಳಿಸಿದರೂ ತೃಣಮೂಲ ಕಾಂಗ್ರೆಸ್ ಉಪಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. ಪ್ರಣವ್ ಮುಖರ್ಜಿ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರವನ್ನು 1.28 ಲಕ್ಷ ಕ್ಕೂ ಹೆಚ್ಚು ಮತಗಳ ಭಾರಿ ಅಂತರದೊಂದಿಗೆ ಗೆದ್ದಿದ್ದರು.

ಪ್ರಣವ್ ಮುಖರ್ಜಿ ಅವರು ರಾಷ್ಟ್ರದ ಅತ್ಯುನ್ನತ ಸ್ಥಾನಕ್ಕೆ ಏರಿದ ಹಿನ್ನೆಲೆಯಲ್ಲಿ ಸ್ಥಾನ ತೆರವುಗೊಳಿಸಿದ್ದರಿಂದ ಅಕ್ಟೋಬರ್ 10ರಂದು ಇಲ್ಲಿ ಉಪ ಚುನಾವಣೆ ನಡೆದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.