ADVERTISEMENT

ಜಗನ್ ಆಪ್ತನ ಷರತ್ತುಬದ್ಧ ಜಾಮೀನು ರದ್ದು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 9:45 IST
Last Updated 20 ಏಪ್ರಿಲ್ 2012, 9:45 IST

ಹೈದರಾಬಾದ್ (ಐಎಎನ್‌ಎಸ್): ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ, ವಿಶೇಷ ಸಿಬಿಐ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದ ವೈ. ಎಸ್. ಜಗನ್‌ಮೋಹನ್ ರೆಡ್ಡಿ ಅವರ ಆಪ್ತ ಸಹಾಯಕ ವಿಜಯ್ ಸಾಯಿ ರೆಡ್ಡಿ ಅವರಿಗೆ ಶುಕ್ರವಾರ ಆಂಧ್ರಪ್ರದೇಶ ಹೈಕೋರ್ಟ್ ಜಾಮೀನನ್ನು ರದ್ದುಗೊಳಿಸಿದೆ.

ನ್ಯಾಯಮೂರ್ತಿ ಕೆ.ಸಿ. ಭಾನು ಗುರುವಾರ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಯನ್ನು ಆಲಿಸಿ ಶುಕ್ರವಾರಕ್ಕೆ ಆದೇಶವನ್ನು ಕಾಯ್ದಿರಿಸಿದ್ದರು. ಅಂತೆಯೇ ಶುಕ್ರವಾರ ವಿಜಯ್ ಸಾಯಿ ರೆಡ್ಡಿ ಅವರಿಗೆ ಸಿಬಿಐ ನ್ಯಾಯಾಲಯವು ನೀಡಿದ್ದ ಷರತ್ತುಬದ್ಧ ಜಾಮೀನನ್ನು ರದ್ದುಗೊಳಿಸಿ ಆದೇಶ ಹೊರಡಿಸಿದರು.

ವಿಶೇಷ ಸಿಬಿಐ ನ್ಯಾಯಾಲಯವು ನೀಡಿರುವ ಷರತ್ತುಬದ್ಧ ಜಾಮೀನಿನಿಂದ ಪ್ರಕರಣದ ಹೆಚ್ಚಿನ ವಿಚಾರಣೆಗೆ ತೊಡಕು ಉಂಟಾಗುತ್ತದೆ. ಇದರಿಂದಾಗಿ ಜಾಮೀನನ್ನು ರದ್ದುಗೊಳಿಸಬೇಕೆಂದು ಸಿಬಿಐ ಹೈಕೋರ್ಟ್‌ನಲ್ಲಿ ಮನವಿಯನ್ನು ಸಲ್ಲಿಸಿತ್ತು.

ಪ್ರಕರಣದ ತನಿಖೆಯು ಅಂತಿಮಘಟ್ಟದಲ್ಲಿದ್ದು, ಸಿಬಿಐ ವೈಎಸ್‌ಆರ್ ಪಕ್ಷದ ಅಧ್ಯಕ್ಷ ಜಗನ್‌ಮೋಹನ್ ರೆಡ್ಡಿ ಮತ್ತು ಅವರ ಆಪ್ತ ವಿಜಯ್ ಸೇರಿದಂತೆ ಇತರರ ವಿರುದ್ಧ ಮೊದಲ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.
ಪ್ರಕರಣದಲ್ಲಿ ವಿಜಯ್ ಎರಡನೇ ಆರೋಪಿಯಾಗಿದ್ದಾರೆ ಎಂದು ಸಿಬಿಐ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ವಿಜಯ್ ಅವರನ್ನು ಸಿಬಿಐ ಅಧಿಕಾರಿಗಳು ಜ. 2ರಂದು ಬಂಧಿಸಿ, ಚಂಚಲಗೂಡ ಕಾರಾಗೃಹಕ್ಕೆ ಕಳುಹಿಸಿದ್ದರು. ಕಳೆದ ಮೂರು ತಿಂಗಳಿನಿಂದ ಬಂಧನದಲ್ಲಿದ್ದ ವಿಜಯ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯವು ಏ.13ರಂದು ಷರತ್ತುಬದ್ಧ ಜಾಮೀನು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.