ADVERTISEMENT

ಜನಲೋಕಪಾಲ ಮಸೂದೆ ಬಳಿಕ ದೀಪಾವಳಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ಮುಂಬೈ (ಪಿಟಿಐ): ರಾಳೆಗಣಸಿದ್ಧಿಯಲ್ಲಿ ಮಂಗಳವಾರ ಗ್ರಾಮಸ್ಥರೊಂದಿಗೆ ದೀಪಾವಳಿ ಆಚರಣೆ ಮಾಡಿದ ಅಣ್ಣಾ ಹಜಾರೆ ಅವರು, `ಜನ ಲೋಕಪಾಲ ಮಸೂದೆಯನ್ನು ಸಂಸತ್ ಅಂಗೀಕರಿಸಿದ ದಿನ ನಿಜವಾದ ದೀಪಾವಳಿ ಆಗಲಿದೆ~ ಎಂದರು.

ಮೌನ ವ್ರತ ಪೂರ್ಣಗೊಳಿಸಿದ ನಂತರ ಅಣ್ಣಾ ಗ್ರಾಮಸ್ಥರೊಂದಿಗೆ ದೀಪಾವಳಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಅವರು, ತಾವು ನಡೆಸಿದ ಚಳವಳಿ ಸಂದರ್ಭದಲ್ಲಿ ಬೆಂಬಲ ನೀಡಿದ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನವದೆಹಲಿ ವರದಿ: ಹೋರಾಟದ ಎಚ್ಚರಿಕೆ: ಭ್ರಷ್ಟಾಚಾರ ವಿರೋಧಿ ಚಳವಳಿ ನಡೆಸುತ್ತಿರುವ ಪ್ರಮುಖರನ್ನು ಸರ್ಕಾರ ಗುರಿ ಮಾಡಿ ತೊಂದರೆ ನೀಡಿದರೆ, ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅಣ್ಣಾ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಣ್ಣಾ ತಂಡದ ಸದಸ್ಯರ ವಿರುದ್ಧ ಸರ್ಕಾರ ಈಗ ಒಂದಲ್ಲಾ ಒಂದು ರೀತಿಯ ಆರೋಪ ಮಾಡುತ್ತಿದ್ದು, ವಿವಾದದಲ್ಲಿ ಸಿಲುಕಿಸುತ್ತಿದೆ. ಸರ್ಕಾರದ ಪ್ರವೃತ್ತಿ ಇದೇ ರೀತಿ ಮುಂದುವರೆದರೆ ಅಗಸ್ಟ್‌ನಲ್ಲಿ ನಡೆದ ಚಳವಳಿಗಿಂತಲೂ ದೊಡ್ಡ ಚಳವಳಿ ರೂಪಿಸಬೇಕಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ವಿಮಾನ ಪ್ರಯಾಣದ ವೇಳೆ ರಿಯಾಯ್ತಿ ಪಡೆದು, ಕಾರ್ಯಕ್ರಮ ಸಂಘಟಕರಿಂದ ಹೆಚ್ಚಿನ ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಕಿರಣ್ ಬೇಡಿ ಅವರನ್ನು ಕೇಜ್ರಿವಾಲ್ ಸಮರ್ಥಿಸಿಕೊಂಡಿದ್ದಾರೆ.

ಕಿರಣ್ ಬೇಡಿ ತಪ್ಪು ಮಾಡಿದ್ದರೆ ಅವರನ್ನು ಜೈಲಿಗೆ ಕಳುಹಿಸಿ ಇಲ್ಲವೇ ನೇಣಿಗೇರಿಸಿ ಎಂದಿರುವ ಅವರು, ಅವರು (ಬೇಡಿ) ತಪ್ಪು ಮಾಡಿದ್ದರೆ ಆ ಬಗ್ಗೆ ಸೂಕ್ತ ತನಿಖೆಗೆ ನಡೆಸಿ, ಆದರೆ ಬೇಡಿ ವಿರುದ್ಧದ ಆರೋಪಗಳನ್ನು ಒಪ್ಪಿ ಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

`ನಾವು ತಪ್ಪು ಮಾಡಿದ್ದರೆ ಕ್ಷಮಿಸಬೇಡಿ, ಸಾಮಾನ್ಯ ಜನರಿಗೆ ನೀಡುವ ಶಿಕ್ಷೆಯ ದುಪ್ಪಟ್ಟು ಶಿಕ್ಷೆ ನೀಡಿ. ಆದರೆ ಜನಲೋಕಪಾಲ ಮಸೂದೆಯನ್ನು ಜಾರಿಗೆ ತನ್ನಿ~ ಎಂದು ಒತ್ತಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.