ADVERTISEMENT

ಜಯಾ ಟಿವಿ ಕಚೇರಿ, ಕೊಡನಾಡ್ ಎಸ್ಟೇಟ್, ಶಶಿಕಲಾ ಆಸ್ತಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:32 IST
Last Updated 9 ನವೆಂಬರ್ 2017, 5:32 IST
ಜಯಾ ಟಿವಿ ಕಚೇರಿ (ಕೃಪೆ -ಎಎಐ )
ಜಯಾ ಟಿವಿ ಕಚೇರಿ (ಕೃಪೆ -ಎಎಐ )   

ಚೆನ್ನೈ: ಚೆನ್ನೈನಲ್ಲಿರುವ ಜಯಾ ಟಿವಿ ಕಚೇರಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಕೊಡನಾಡು ಎಸ್ಟೇಟ್, ಎಐಎಡಿಎಂಕೆ ನೇತಾರೆ ವಿ.ಕೆ ಶಶಿಕಲಾ ಅವಕ ಕುಟುಂಬ ಮತ್ತು ಬೆಂಬಲಿಗರಿಗೆ ಸೇರಿದ ಆಸ್ತಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತೆರಿಗೆ ವಂಚನೆ  ಮತ್ತು ಅಕ್ರಮ ಹಣ ಹೊಂದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ.

ಎಐಎಡಿಎಂಕೆ ಮುಖವಾಣಿ ನಮಧು ಎಂಜಿಆರ್, ಜಯಾ ಟಿವಿ, ಜಾಸ್ ಸಿನಿಮಾಸ್ ಸೇರಿದಂತೆ ಶಶಿಕಲಾ ಅವರ ಅಳಿಯ ಟಿಟಿವಿ ದಿನಕರನ್ ಅವರ ಆಸ್ತಿ ಮೇಲೂ ದಾಳಿ ನಡೆದಿದೆ.

ADVERTISEMENT

ಬೆಳಗ್ಗೆ 6 ಗಂಟೆಗೆ ಚೆನ್ನೈ , ತಮಿಳುನಾಡಿನ ಪ್ರಮುಖ ನಗರಗಳು ಸೇರಿದಂತೆ ಬೆಂಗಳೂರು, ಪುದುಚ್ಚೇರಿ, ಹೈದರಾಬಾದ್, ದೆಹಲಿಯಲ್ಲಿ ಏಕಕಾಲಕ್ಕೆ ಈ ದಾಳಿ ಆರಂಭವಾಗಿದೆ.

ನಕಲಿ ಕಂಪೆನಿ, ಅಪ್ರಾಮಾಣಿಕ ಹೂಡಿಕೆ ಮತ್ತು ನಕಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂಬ ಸಂದೇಹವಿರುವುದರಿಂದ ದಾಳಿ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ. ಮಿದಾಸ್ ಡಿಸ್ಟೆಲರೀಸ್ ಮತ್ತು ಶೌಖಾರ್ ಪೇಟೆಯಲ್ಲಿರುವ ಚಿನ್ನದ ವ್ಯಾಪಾರ ಕೇಂದ್ರಗಳ ಮೇಲೂ ಐಟಿ ಕಣ್ಣಿಟ್ಟಿದೆ.

ಬೆಳಗ್ಗೆ 6 ಗಂಟೆಗೆ ಐಟಿ ದಾಳಿ ನಡೆದಾಗ ನಮಧು ಎಂಜಿಆರ್, ಜಯಾ ಟಿವಿ ಕಚೇರಿಯಲ್ಲಿದ್ದ ನೌಕರರ ಮೊಬೈಲ್ ಫೋನ್‍ಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಆಡ್ಯದಲ್ಲಿರುವ ದಿನಕರನ್ ಅವರ ನಿವಾಸ, ಶಶಿಕಲಾ ಅವರ ಪತಿ ನಟರಾಜನ್ ಅವರ ತಂಜಾವೂರಿನಲ್ಲಿರುವ ನಿವಾಸ ಮತ್ತು ಮನ್ನಾರ್ ಗುಡಿ ನಗರದಲ್ಲಿರುವ ಶಶಿಕಲಾ ಅವರ ಸಂಬಂಧಿಕರ ಮನೆ ಮೇಲೂ ದಾಳಿ ನಡೆದಿದೆ.

ಕರ್ನಾಟಕದಲ್ಲಿರುವ ಎಐಎಡಿಎಂಕೆ ನಾಯಕರ ನಿವಾಸದ ಮೇಲೂ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ಹಿಂದೂಸ್ತಾನ್  ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.