ADVERTISEMENT

ಜಾರಿಗೆ ಬಂದ ಭೂಸ್ವಾಧೀನ ಕಾನೂನು

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 19:30 IST
Last Updated 1 ಜನವರಿ 2014, 19:30 IST

ನವದೆಹಲಿ (ಐಎಎನ್‌ಎಸ್‌): ಕಳೆದ ವರ್ಷ ಸಂಸತ್‌ ಅಂಗೀಕರಿಸಿದ ಹೊಸ ಭೂಸ್ವಾಧೀನ ಕಾನೂನು ಬುಧವಾರ­ದಿಂದ ಜಾರಿಗೆ ಬಂದಿದೆ. ಜಮೀನು ಸ್ವಾಧೀನಕ್ಕೆ ಒಳಗಾದ ರೈತರಿಗೆ ನ್ಯಾಯಯುತ ಪರಿಹಾರ, ಪುನರ್ವಸತಿ ಒದಗಿಸುವ ಉದ್ದೇಶವನ್ನು ಕಾನೂನು ಹೊಂದಿದೆ.

ಪ್ರಸ್ತುತ ಜಾರಿಗೆ ಬಂದಿರುವ ‘2013ರ ನ್ಯಾಯಯುತ ಪರಿಹಾರ, ಪುನರ್ವಸತಿಯಲ್ಲಿ ಪಾರದರ್ಶಕತೆ ಮತ್ತು ಪುನಸ್ಥಾಪನೆ ಕಾಯ್ದೆ’ಯು 1984ರ ಹಳೆಯ ಕಾಯ್ದೆಗೆ ಪರ್ಯಾಯವಾಗಿದೆ.

‘ಇದೊಂದು ಚಾರಿತ್ರಿಕ ಕಾನೂನು. ಹಿಂದೆ ಇದ್ದ ಕಾನೂನು ವಸಾಹುತಶಾಹಿ ಮತ್ತು ಪ್ರಜಾಸತ್ತಾತ್ಮಕವಾಗಿರಲಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್‌ ಹೇಳಿದ್ದಾರೆ.

ಈಗ ಜಾರಿಗೆ ಬಂದಿರುವ ಕಾನೂನು ಪ್ರಕಾರ, ರೈತರು ಮತ್ತು ಜಮೀನು ಮಾಲೀಕರಿಗೆ ಗ್ರಾಮಾಂತರ ಪ್ರದೇಶ­ದಲ್ಲಿ, ಮಾರುಕಟ್ಟೆ ಮೌಲ್ಯದ ನಾಲ್ಕು ಪಟ್ಟು  ಮತ್ತು ನಗರ ಪ್ರದೇಶದಲ್ಲಿ ಎರಡು ಪಟ್ಟು ವರೆಗೆ ಪರಿಹಾರ ನೀಡುವುದಕ್ಕೆ ಅವಕಾಶ ಇದೆ.

ಖಾಸಗಿ ಯೋಜನೆಗಳಿಗೆ ಜಮೀನು ಸ್ವಾಧೀನ ಪಡಿಸುವಾಗ ಶೇ 80ರಷ್ಟು ರೈತರು  ಒಪ್ಪಿಗೆ ನೀಡುವುದು ಕಡ್ಡಾಯ. ಹಾಗೆಯೇ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಯೋಜನೆಗಳಿಗೆ ಶೇ 70ರಷ್ಟು ರೈತರು ಒಪ್ಪಿಗೆ ನೀಡಲೇ­ಬೇಕಿದೆ ಎಂಬುದು ಈ ಕಾನೂನಿನ ಇನ್ನೊಂದು ಮಹತ್ವದ ಅಂಶ. 

ಈ ಕಾನೂನಿನ ಪರಿಣಾಮಕಾರಿ ಅನುಷ್ಠಾನಕ್ಕೆ ಒಂದು ವರ್ಷದೊಳಗೆ ಇತರ 13 ಕಾನೂನುಗಳಿಗೆ ತಿದ್ದುಪಡಿ ಅಗತ್ಯ ಎಂದು ಜೈರಾಂ ರಮೇಶ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.