ಬೈರೂತ್ (ಎಎಫ್‌ಪಿ): ಸಿರಿಯಾದ ರಖ್ಖಾದಲ್ಲಿ ನವೆಂಬರ್‌ನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಬ್ರಿಟನ್ ಮೂಲದ ಉಗ್ರ ‘ಜಿಹಾದಿ ಜಾನ್’ ಮೃತಪಟ್ಟಿದ್ದನ್ನು ಐಎಸ್ ಖಚಿತಪಡಿಸಿದೆ.
‘ಜಿಹಾದಿ ಜಾನ್’ನ ಮೂಲ ಹೆಸರು ಮೊಹಮ್ಮದ್ ಎಂವಾಜಿ. ಅಪಹೃತ ಒತ್ತೆಯಾಳುಗಳ ಶಿರಚ್ಛೇದದ ವಿಡಿಯೊಗಳಲ್ಲಿ ಮುಸುಕುಧಾರಿಯಾಗಿ ‘ಜಿಹಾದಿ ಜಾನ್’ ಕಾಣಿಸಿಕೊಳ್ಳುತ್ತಿದ್ದ. ಆತನನ್ನು ಮುಹಾರಿಬ್ ಅಲ್ ಮುಹಾಜಿರ್ ಎಂಬ ಹೆಸರಿನಲ್ಲಿ ಕರೆದಿರುವ ಐಎಸ್, ನಿಧನ ವಾರ್ತೆಯನ್ನು ತನ್ನ ಅಂತರ್ಜಾಲ ನಿಯತಕಾಲಿಕೆ ಡಾಬಿಕ್‌ನಲ್ಲಿ ಪ್ರಕಟಿಸಿದೆ.
ಅಣ್ಣ ಉಗ್ರನಾಗಿರಲಾರ: ಧರ್ ಸಹೋದರಿ ವಿಶ್ವಾಸ (ಲಂಡನ್ನಿನಿಂದ ಪಿಟಿಐ ವರದಿ): ಮತ್ತೊಂದೆಡೆ, ಐಎಸ್ ಇತ್ತೀಚೆಗೆ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಹೊಸ ಜಿಹಾದಿ ಜಾನ್ ಹೆಸರಿನಲ್ಲಿ ಮುಸುಕುಧಾರಿಯಾಗಿ ಕಾಣಿಸಿಕೊಂಡ ವ್ಯಕ್ತಿ ತನ್ನ ಸಹೋದರ ಆಗಿರಲಾರ ಎಂದು ಭಾರತ ಮೂಲದ ಸಿದ್ಧಾರ್ಥ್ ಧರ್‌ನ ಸಹೋದರಿ ಭರವಸೆ ವ್ಯಕ್ತಪಡಿಸಿದ್ದಾರೆ.
ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್‌ನ ಗೃಹ ವ್ಯವಹಾರಗಳ ಸಮಿತಿಯ ಮುಂದೆ ಕೋನಿಕಾ ಧರ್ ಅವರು ಮಂಗಳವಾರ ವಿಚಾರಣೆಗೆ ಹಾಜರಾದರು.
‘ನಾನು ವಿಡಿಯೊದಲ್ಲಿ ನೋಡಿದ ಮುಸುಕುಧಾರಿ ನನ್ನ ಅಣ್ಣ ಅಲ್ಲ ಎಂದು ಈಗಲೂ ನಂಬಿದ್ದೇನೆ. ಅದನ್ನು ಸ್ಪಷ್ಟಪಡಿಸಿಕೊಳ್ಳಲು ನನಗೆ ಅವಕಾಶವೂ ಇಲ್ಲ. ಇದನ್ನೆಲ್ಲಾ ಮಾಡಿದ ವ್ಯಕ್ತಿ ನಿಜಕ್ಕೂ ನನ್ನ ಅಣ್ಣನೇ? ಆತ ಹೀಗೆಲ್ಲಾ ಮಾಡುತ್ತಾನೆ ಎಂಬುದನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಿಲ್ಲ’ ಎಂದು ಕೋನಿಕಾ ಹೇಳಿದ್ದಾರೆ.
‘ಈ ವಿಚಾರದಲ್ಲಿ ನಾನೂ ತಪ್ಪಿತಸ್ಥೆ ಎಂದೆನಿಸುತ್ತಿದೆ. ನನ್ನ ಅಣ್ಣನನ್ನು ಕಳೆದುಕೊಂಡಿದ್ದೇನೆ. ನನ್ನ ಬದುಕಿನ ಭಾಗವಾಗಿದ್ದ ಆತನನ್ನು ತಡೆಯಲು ನನ್ನಿಂದ ಏಕೆ ಸಾಧ್ಯವಾಗಲಿಲ್ಲ ಎಂಬುದು ಕಾಡುತ್ತಿದೆ’ ಎಂದಿದ್ದಾರೆ.
‘ಇದು ನಮ್ಮ ಕುಟುಂಬವನ್ನು ಆತಂಕಕ್ಕೀಡುಮಾಡಿದೆ. ದಶಕದ ಹಿಂದೆಯೇ ಆತ ಹೇಗೆ ಮತಾಂತರಗೊಂಡಿದ್ದ ಮತ್ತು ಈ ರೀತರಿಯ ವಿಧ್ವಂಸಕಾರಿ ದೃಷ್ಟಿಕೋನವನ್ನು ಹೇಗೆ ಅಳವಡಿಸಿಕೊಂಡ ಎಂಬುದು ಅರ್ಥವಾಗುತ್ತಿಲ್ಲ. ಆದರೆ ಸಮುದಾಯದೊಳಗಿನ ಕೆಲವರು ಆತನ ಮನಸಿನಲ್ಲಿ ಈ ರೀತಿಯ ಭಾವನೆ ಬಿತ್ತಿರಬಹುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.