ADVERTISEMENT

ಜೇಟ್ಲಿಗೆ ಮೂತ್ರಪಿಂಡ ಸಮಸ್ಯೆ

ಅನಾರೋಗ್ಯದಿಂದ ಲಂಡನ್ ಭೇಟಿ ರದ್ದು

ಪಿಟಿಐ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ   

ನವದೆಹಲಿ : ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ಶೀಘ್ರವೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.

‘ಅವರು ಆಸ್ಪತ್ರೆಗೆ ದಾಖಲಾಗಿಲ್ಲ. ಆದರೆ ಸೋಂಕು ಉಂಟಾಗುವ ಸಾಧ್ಯತೆಯಿಂದಾಗಿ ಹೊರಗೆ ಹೋಗದಂತೆ ವೈದ್ಯರು ಸಲಹೆ ನೀಡಿದ್ದಾರೆ. ಏಮ್ಸ್ ವೈದ್ಯರು ಜೇಟ್ಲಿ ನಿವಾಸದಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ, ಅವರನ್ನು ಏಮ್ಸ್‌ಗೆ ದಾಖಲಿಸಬಹುದು. ಮೂತ್ರಪಿಂಡ ಕಸಿ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ’ ಎಂದು ಮೂಲಗಳು ಹೇಳಿವೆ.

ನಿವಾಸದಿಂಲೇ ಕರ್ತವ್ಯ ನಿರ್ವಹಣೆ:  ಸೋಮವಾರದಿಂದ ಕಚೇರಿಗೆ ಗೈರಾಗಿದ್ದರೂ, ತಮ್ಮ ನಿವಾಸ‌ದಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಮರುಚುನಾಯಿತರಾಗಿರುವ ಜೇಟ್ಲಿ, ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ.

ADVERTISEMENT

10ನೇ ಬ್ರಿಟನ್–ಭಾರತ ಹಣಕಾಸು ಮಾತುಕತೆಯಲ್ಲಿ ಪಾಲ್ಗೊಳ್ಳಲು ಮುಂದಿನವಾರ ಲಂಡನ್‌ಗೆ ಭೇಟಿ ನೀಡಬೇಕಿತ್ತು. ‘ಲುಕಿಂಗ್ ಅಹೆಡ್ ಟು 2022: ಇಂಡಿಯಾಸ್ ಗ್ಲೋಬಲ್‌ ವಿಷನ್‌’ ವಿಷಯ ಕುರಿತು 12ರಂದು ಉಪನ್ಯಾಸ ನೀಡಲಿದ್ದರು. ಆದರೆ ಅನಾರೋಗ್ಯದಿಂದ ಈ ಭೇಟಿ ರದ್ದುಪಡಿಸಲಾಗಿದೆ.

ದೀರ್ಘಾವಧಿಯಿಂದ ಮಧುಮೇಹದಿಂದ ಬಳಲುತ್ತಿರುವುದರಿಂದ ಜೇಟ್ಲಿ ದೇಹದ ತೂಕ ಹೆಚ್ಚಳವಾಗಿತ್ತು. ಇದನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ 2014ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ಉಂಟಾಗಿದ್ದ ಸಣ್ಣ ಸಮಸ್ಯೆಯಿಂದ ಮೂತ್ರಪಿಂಡದಲ್ಲಿ ಸಮಸ್ಯೆಯಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.