ADVERTISEMENT

ಟ್ಯಾಗೋರ್ ಸ್ಮರಣಾರ್ಥ ಅಂತರರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ನವದೆಹಲಿ (ಪಿಟಿಐ): ಕವಿ ರವೀಂದ್ರನಾಥ ಟ್ಯಾಗೋರ್ ಅವರ ಸ್ಮರಣಾರ್ಥ ವಿಶ್ವ ಬ್ರಾತೃತ್ವಕ್ಕಾಗಿ ಉತ್ತೇಜನ ನೀಡಿದ ವ್ಯಕ್ತಿಗೆ ಒಂದು ಕೋಟಿ ರೂಪಾಯಿ ಬಹುಮಾನದ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಸರ್ಕಾರ ಸ್ಥಾಪಿಸಲಿದೆ.

ಬಜೆಟ್ ಮಂಡನೆಯಲ್ಲಿ ಈ ವಿಷಯ ಪ್ರಕಟಿಸಿದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಗುರುದೇವ ರವೀಂದ್ರನಾಥ ಟ್ಯಾಗೋರರ ನೆನಪಿನಲ್ಲಿ ಸ್ಥಾಪಿಸಲಾಗುವ ಈ ಅಂತರರಾಷ್ಟ್ರೀಯ ಪ್ರಶಸ್ತಿ ಒಂದು ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ಒಳಗೊಂಡಿದೆ. ವಿಶ್ವ ಮಟ್ಟದಲ್ಲಿ ಬ್ರಾತೃತ್ವದ ಮೌಲ್ಯಗಳನ್ನು ಉತ್ತೇಜಿಸಿದ ವ್ಯಕ್ತಿಗಳಿಗೆ ನೀಡಲಾಗುವ ಈ ಪ್ರಶಸ್ತಿ ಟ್ಯಾಗೋರರ 150ನೇ ಜನ್ಮದಿನದ ಅಂಗವಾಗಿ ನಡೆಯಲಿರುವ ಸಾಂಸ್ಕೃತಿಕ ಮತ್ತು ಪ್ರದರ್ಶನ ಕಾರ್ಯಕ್ರಮಗಳ ಭಾಗವಾಗಿರುತ್ತದೆ ಎಂದು ತಿಳಿಸಿದರು.

ಮೇ 4ರಿಂದ ವರ್ಷವಿಡೀ ಕವಿ ಟ್ಯಾಗೋರರ 150ನೇ ಜನ್ಮದಿನದ ಆಚರಣೆ ಕಾರ್ಯಕ್ರಮಗಳು ಯೂರೋಪ್, ಅಮೆರಿಕಾ ಮತ್ತು ಏಷ್ಯಾದ ಹಲವಾರು ರಾಷ್ಟ್ರಗಳಲ್ಲಿ ನಡೆಯಲಿದೆ. ಅಲ್ಲದೆ ಭಾರತ-ಬಾಂಗ್ಲಾದೇಶ ಆಚರಣಾ ಸಮಿತಿ ಸಹಯೋಗದಲ್ಲಿ ಬಾಂಗ್ಲಾದೇಶದಲ್ಲಿ ಸರಣಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಸುಂಕ ವಿನಾಯಿತಿ: ವಿದೇಶಗಳಲ್ಲಿ ಪ್ರದರ್ಶನಗೊಂಡು ಭಾರತಕ್ಕೆ ವಾಪಸು ತಂದು ದೇಶದೊಳಗೆ ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶಿಸುವ ಕಲಾಕೃತಿ ಮತ್ತು ಪ್ರಾಚೀನ ವಸ್ತುಗಳ ಮೇಲಿನ ಸುಂಕದ ವಿನಾಯಿತಿಯನ್ನು ವಿಸ್ತರಿಸಲಾಗಿದೆ.

ಸಾರ್ವಜನಿಕ ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕೆಂದು ಆಮದಾಗುವ ಕಲಾಕೃತಿ ಮತ್ತು ವಸ್ತುಗಳ ಮೇಲಿನ ಸುಂಕ ವಿನಾಯಿತಿಯನ್ನು ಸಾಮಾನ್ಯ ಜನರ ವೀಕ್ಷಣೆಗೆ ಮುಕ್ತವಾಗಿರುವ ಖಾಸಗಿ ಸಂಸ್ಥೆಗಳಿಗೂ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.