ADVERTISEMENT

ಠಾಕ್ರೆ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 19:30 IST
Last Updated 16 ನವೆಂಬರ್ 2012, 19:30 IST

ಮುಂಬೈ (ಪಿಟಿಐ, ಐಎಎನ್‌ಎಸ್):  ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ ಕಂಡು ಬಂದಿದೆ. ಆದರೆ ಅವರ ಸ್ಥಿತಿ ಈಗಲೂ ಕಳವಳಕಾರಿಯಾಗಿಯೇ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಜೀವ ರಕ್ಷಕ ಯಂತ್ರ (ವೆಂಟಿಲೇಟರ್) ತೆಗೆಯಲಾಗಿದೆ.

ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಸಾವಿರಾರು ಕಾರ್ಯಕರ್ತರು ಬಾಂದ್ರಾ ಉಪನಗರದಲ್ಲಿನ ಠಾಕ್ರೆ ನಿವಾಸ `ಮಾತೋಶ್ರೀ~ ಮುಂದೆ ಸೇರಿ, `ಜೈ ಭವಾನಿ~, `ಜೈ ಶಿವಾಜಿ~ ಘೋಷಣೆಗಳನ್ನು ಹಾಕುತ್ತಿದ್ದಾರೆ. ನಿವಾಸದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಭಾರಿ ಸಂಖ್ಯೆಯಲ್ಲಿ ಮಾಧ್ಯಮದವರು ಬೀಡು ಬಿಟ್ಟಿದ್ದಾರೆ.

`ಸಹಸ್ರಾರು ಜನರ ಶುಭ ಹಾರೈಕೆ ಮತ್ತು ಪ್ರಾರ್ಥನೆಯಿಂದ ದಿನ ಕಳೆದಂತೆ ಠಾಕ್ರೆ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ~ ಎಂದು ಶಿವಸೇನೆ ಹಿರಿಯ ಮುಖಂಡ ಮತ್ತು ಲೋಕಸಭೆ ಮಾಜಿ ಅಧ್ಯಕ್ಷ ಮನೋಹರ್ ಜೋಷಿ ಸುದ್ದಿಗಾರರಿಗೆ ತಿಳಿಸಿದರು.

`ಮಾತೋಶ್ರೀ~ಯ ಎರಡನೇ ಅಂತಸ್ತಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಠಾಕ್ರೆ ಅವರ ಕೋಣೆ ಪ್ರವೇಶಿಸಲು ಉದ್ಧವ್ ಠಾಕ್ರೆ, ಅವರ ಪತ್ನಿ ರಶ್ಮಿ ಮತ್ತು ಲೀಲಾವತಿ ಆಸ್ಪತ್ರೆಯ ವೈದ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶಿವಸೇನೆ ಪ್ರಮುಖ ಮುಖಂಡರು, ಸಿನಿಮಾ ರಂಗದ ಗಣ್ಯರು ಮತ್ತು ಉದ್ಯಮಿಗಳು `ಮಾತೋಶ್ರೀ~ಗೆ ಶುಕ್ರವಾರ ಕೂಡ ಭೇಟಿ ನೀಡಿ ಠಾಕ್ರೆ ಆರೋಗ್ಯ ವಿಚಾರಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಕೆ. ಶಂಕರನಾರಾಯಣನ್, ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ಬಾಬಾರಾಮ್‌ದೇವ್, ನಟರಾದ ಸುರೇಶ್ ಒಬೆರಾಯ್ ಮತ್ತು ಪುತ್ರ ವಿವೇಕ್ ಮುಂತಾದವರು ಇವರಲ್ಲಿ ಸೇರಿದ್ದರು.

ಆರೋಗ್ಯ ಸ್ಥಿರ- ಉದ್ಧವ್: ಬಾಳ ಸಾಹೇಬ್ ಠಾಕ್ರೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿಯೇ ಇದೆ. ಅವರು ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಉದ್ಧವ್ ಠಾಕ್ರೆ ತಿಳಿಸಿದರು.

ಮುಂಬೈ ಸಹಜ ಸ್ಥಿತಿಗೆ
ಠಾಕ್ರೆ ಅವರ ಆರೋಗ್ಯದಲ್ಲಿ ಶುಕ್ರವಾರ ಸ್ವಲ್ಪಮಟ್ಟಿನ ಸುಧಾರಣೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ನಗರ ಸಹಜ ಸ್ಥಿತಿಗೆ ಮರಳುತ್ತಿದೆ.

ADVERTISEMENT

 ಬುಧವಾರ ರಾತ್ರಿ ಠಾಕ್ರೆ ಅವರ ಆರೋಗ್ಯ ಕ್ಷೀಣಿಸಿದ ಬಳಿಕ ದಾದರ್ ಸೇರಿದಂತೆ ಮುಂಬೈನ ಪ್ರಮುಖ ಉಪನಗರಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಬಾಲಿವುಡ್‌ನ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಂಡಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.