
ನವದೆಹಲಿ (ಪಿಟಿಐ): ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿನ(ಡಿಡಿಸಿಎ) ಅವ್ಯವಹಾರ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಡಿಡಿಸಿಎ ಅವ್ಯವಹಾರ ಕುರಿತು ತನಿಖೆಗೆ ಆಯೋಗ ನೇಮಿಸಿರುವ ದೆಹಲಿ ಸರ್ಕಾರದ ಕ್ರಮ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಶುಕ್ರವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಲಾಗಿದೆ.
ಹೈಕೋರ್ಟ್‌ನಲ್ಲಿ ಪಿಐಎಲ್: ರಮಾಕಾಂತ್ ಕುಮಾರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಜಿ.ರೋಹಿಣಿ ಹಾಗೂ ನ್ಯಾಯಮೂರ್ತಿ ಜಯಂತನಾಥ್ ಅವರ ಪೀಠ ನಡೆಸಿತು.
ಈ ವೇಳೆ, ಮಧ್ಯ ಪ್ರವೇಶಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಸಂಜಯ್ ಜೈನ್, ಅರ್ಜಿದಾರರಿಗೆ ಈ ವಿಷಯವನ್ನು ಪ್ರಶ್ನಿಸಲು ಯಾವುದೇ ಹಕ್ಕಿಲ್ಲ ಎಂದರು. ಅರ್ಜಿದಾರರು ಡಿಡಿಸಿಎ ಅಥವಾ ಕೇಂದ್ರ ಸರ್ಕಾರವನ್ನು ವಾದಿಗಳನ್ನಾಗಿ ಮಾಡಿಲ್ಲ ಎಂದರು.
ಜೈನ್ ಅವರ ಆಕ್ಷೇಪಕ್ಕೆ ಸ್ಪಂದಿಸಿದ ಪೀಠವು ಅರ್ಜಿಯ ಪ್ರತಿಯೊಂದನ್ನು ಕೇಂದ್ರ ಸರ್ಕಾರಕ್ಕೆ ನೀಡುವಂತೆ ರಮಾಕಾಂತ್ ಅವರಿಗೆ ಸೂಚಿಸಿತು. ಮುಂದಿನ ವಿಚಾರಣೆಯನ್ನು ಜನವರಿ 27ಕ್ಕೆ ನಿಗದಿಪಡಿಸಿತು.
ಡಿಡಿಸಿಎಯಲ್ಲಿ ನಡೆದಿರುವ ಅಕ್ರಮಗಳು ಹಾಗೂ ಅವ್ಯವಹಾರಗಳ ತನಿಖೆಗೆ ಸಮಿತಿ ರಚಿಸಿ 2015ರ ಡಿಸೆಂಬರ್ 22ರಂದು ಅಧಿಸೂಚನೆ ಹೊರಡಿಸಿದ್ದ ದೆಹಲಿ ಸರ್ಕಾರ ಕ್ರಮವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.
ತನಿಖೆ ನಿಲ್ಲದು: ಈ ಬೆನ್ನಲ್ಲೆ, ತನಿಖಾ ಆಯೋಗ ತನ್ನ ಕೆಲಸವನ್ನು ಮುಂದುವರೆಸಲಿದೆ ಎಂದು ಕೇಜ್ರಿವಾಲ್ ಅವರು ಒತ್ತಿ ಹೇಳಿದ್ದಾರೆ.
‘ಡಿಡಿಸಿಎ ತನಿಖಾ ಸಮಿತಿಯು ತನ್ನ ಕಾರ್ಯವನ್ನು ಮುಂದುವರೆಸಲಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ತನಿಖಾ ಆಯೋಗ ನೇಮಿಸಿದ ಎಎಪಿ ಸರ್ಕಾರದ ನಿರ್ಧಾರವನ್ನು‘ಅಸಾಂವಿಧಾನಿಕ ಹಾಗೂ ಅಕ್ರಮ’ ಎಂದು ಕೇಂದ್ರ ಸರ್ಕಾರ ಜನವರಿ 8ರಂದು ಘೋಷಿಸಿತ್ತು.
ಪ್ರತಿಕ್ರಿಯಿಸಲು ಕೇಜ್ರಿ, ಕೀರ್ತಿಗೆ ಸೂಚನೆ: ಮತ್ತೊಂದೆಡೆ, ಪ್ರಕರಣ ಸಂಬಂಧ ಡಿಡಿಸಿಎ ದಾಖಲಿಸಿರುವ ಸಿವಿಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಜ್ರಿವಾಲ್ ಹಾಗೂ ಬಿಜೆಪಿಯ ಸಂಸದ ಕೀರ್ತಿ ಆಜಾದ್ ಅವರಿಗೆ ದೆಹಲಿ ಹೈಕೋರ್ಟ್ ಸೂಚಿಸಿದೆ.
ಡಿಡಿಸಿಎ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಒಪ್ಪಿರುವ ನ್ಯಾಯಾಲಯದ ಜಂಟಿ ರಜಿಸ್ಟ್ರಾರ್ ಅನಿಲ್ ಕುಮಾರ್ ಸಿಸೋಡಿಯಾ, ಈ ಸಂಬಂಧ ಮಾರ್ಚ್ 2ರ ಒಳಗೆ ಪ್ರತಿಕ್ರಿಯೆ ನೀಡಲು ಕೇಜ್ರಿವಾಲ್ ಹಾಗೂ ಕೀರ್ತಿ ಆಜಾದ್ ನೋಟಿಸ್ ಮೂಲಕ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.