ADVERTISEMENT

ಡೇರಿಯಲ್ಲಿ ಬೆಂಕಿ: ಏಳು ಜನರ ಸಾವು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

ಮೆಹಸಾನ (ಗುಜರಾತ್) (ಪಿಟಿಐ): ಏಷ್ಯಾದ ಬಹುದೊಡ್ಡ ಡೇರಿಗಳಲ್ಲಿ ಒಂದಾದ ದೂದ್‌ಸಾಗರ್, `ಅಮೂಲ್~ ಹೆಸರಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಇದರ ಅಂಗಸಂಸ್ಥೆಯಲ್ಲಿ ಶನಿವಾರ ರಾತ್ರಿ ಭಾರಿ ಬೆಂಕಿ ಅನಾಹುತದಿಂದಾಗಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ.

`ದೂದ್‌ಸಾಗರ್ ಡೇರಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಿಂದ ಐದು ಮಂದಿ ಮೃತಪಟ್ಟಿದ್ದು 22 ಮಂದಿ ಗಾಯಗೊಂಡಿದ್ದಾರೆ~ ಎಂದು ಮೆಹಸಾನ ಜಿಲ್ಲಾಧಿಕಾರಿ ರಾಜ್‌ಕುಮಾರ್ ಬೇನಿವಾಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಡೇರಿಯ ಹಾಲುಪುಡಿ ಉತ್ಪಾದನಾ ವಿಭಾಗದ ಸಮೀಪ ಇರುವ ಹವಾನಿಯಂತ್ರಿತ ಕೊಠಡಿಯ ಟ್ಯಾಂಕ್‌ನ ಗ್ಯಾಸ್ ಹರಿಯುವ ಕೊಳವೆಯೊಂದರಲ್ಲಿ ಸೋರುವಿಕೆಯಿಂದಾಗಿ  ಬೆಂಕಿ ಅನಾಹುತ ಸಂಭವಿಸಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ನಂತರ ಬಾಯ್ಲರ್ ಸ್ಫೋಟಗೊಂಡ ವರದಿಯೂ ಬಂತು ಎಂದು ಅವರು ತಿಳಿಸಿದ್ದಾರೆ.

ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್) 13 ಡೇರಿ ಸದಸ್ಯ ಸಂಘ ಹೊಂದಿದೆ. ಇದರಲ್ಲಿ ದೂದ್‌ಸಾಗರ್ ಒಂದಾಗಿದ್ದು ಇದು ಏಷ್ಯಾದಲ್ಲಿ ಅತಿದೊಡ್ಡ ಡೇರಿ ಸ್ಥಾವರ ಹೊಂದಿದೆ. ಹನ್ನೊಂದು ಅಗ್ನಿಶಾಮಕ ಯಂತ್ರಗಳನ್ನು ಬೆಂಕಿ ಆರಿಸಲು ನಿಯೋಜಿಸಲಾಗಿತ್ತು. ಡೇರಿಯ ದೊಡ್ಡ ಹವಾನಿಯಂತ್ರಿತ ಕಟ್ಟಡ ಕುಸಿಯಿತು.

ಅವಶೇಷಗಳನ್ನು ತೆಗೆಯುವ ಕಾರ್ಯ ಮುಂದುವರೆದಿದ್ದು ಮೃತಪಟ್ಟವರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ತಿಳಿಸಿರುವ ಅಧಿಕಾರಿಗಳು ಕಾರ್ಯವನ್ನು ತ್ವರಿತಗೊಳಿಸಲು ಅಹಮದಾಬಾದ್ ನಗರಸಭೆಯಿಂದ ದೊಡ್ಡ ಕ್ರೇನ್‌ಗಳನ್ನು ಕೇಳಲಾಗಿದೆ ಎಂದು ತಿಳಿಸಿದ್ದಾರೆ. ಕಟ್ಟಡದ ಅವಶೇಷದಡಿ ಹೆಚ್ಚು ಮಂದಿ ಸಿಲುಕಿರಬಹುದು ಎಂಬುದನ್ನು ಅಧಿಕಾರಿಗಳು ಅಲ್ಲಗಳೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.