ADVERTISEMENT

ತನಿಖೆಗೆ ಹಾಜರಾದ `ಝೀ' ಮುಖ್ಯಸ್ಥ

ಪಾಸ್‌ಪೋರ್ಟ್ ವಶಕ್ಕೆ ನ್ಯಾಯಾಲಯ ಆದೇಶ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST
ತನಿಖೆಗೆ ಹಾಜರಾದ `ಝೀ' ಮುಖ್ಯಸ್ಥ
ತನಿಖೆಗೆ ಹಾಜರಾದ `ಝೀ' ಮುಖ್ಯಸ್ಥ   

ನವದೆಹಲಿ (ಪಿಟಿಐ): ಸುದ್ದಿ ಪ್ರಕಟಣೆ ವಿಷಯವಾಗಿ ಜಿಂದಾಲ್ ಕಂಪೆನಿ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ಅವರಿಗೆ 100 ಕೋಟಿ ರೂಪಾಯಿ ಬೇಡಿಕೆಯಿಟ್ಟ ಪ್ರಕರಣದ ಸಂಬಂಧ `ಝೀ' ಸಮೂಹದ ಅಧ್ಯಕ್ಷ ಸುಭಾಷ್‌ಚಂದ್ರ ಇಲ್ಲಿ ಶನಿವಾರ ಪೊಲೀಸರ ಮುಂದೆ ಹಾಜರಾಗಿ ತನಿಖೆ ಎದುರಿಸಿದರು.

ದೆಹಲಿ ನ್ಯಾಯಾಲಯದಿಂದ ಡಿಸೆಂಬರ್ 14ರವರೆಗೆ ಮಧ್ಯಂತರ ರಕ್ಷಣೆಯ ಜಾಮೀನು ಪಡೆದಿರುವ ಸುಭಾಷ್‌ಚಂದ್ರ ಚಾಣುಕ್ಯಪುರಿಯ ಅಪರಾಧ ವಿಭಾಗ ಪೊಲೀಸರ ಎದುರು ತಮ್ಮ ವಕೀಲರ ಜತೆ ವಿಚಾರಣೆಗೆ ಹಾಜರಾದರು. ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಪೊಲೀಸರು ಸುಭಾಷ್‌ಚಂದ್ರ ಅವರಿಗೆ ಮೂರು ನೋಟಿಸ್‌ಗಳನ್ನು ಜಾರಿ ಮಾಡಿದ್ದರು. ಆದರೆ ವಿದೇಶ ಪ್ರವಾಸದಲ್ಲಿದ್ದ ಕಾರಣ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಪೊಲೀಸರು ನೋಟಿಸ್ ಜಾರಿ ಮಾಡಿದ 96 ಗಂಟೆಗಳೊಳಗೆ ವಿಚಾರಣೆಗೆ ಹಾಜರಾಗುವುದಾಗಿ ಡಿಸೆಂಬರ್ 3ರಂದು ಸುಭಾಷ್ ಚಂದ್ರ ಹೇಳಿದ್ದರು. ಅದರಂತೆ ಪೊಲೀಸರು ಡಿ.8ರೊಳಗೆ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದರು. ಪ್ರಕರಣದಲ್ಲಿ ಸುಭಾಷ್‌ಚಂದ್ರ ಅವರನ್ನೂ ಅಪರಾಧಿ ಎಂದು ಪರಿಗಣಿಸುವಂತೆ ಸ್ಥಳೀಯ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಕೋರಿದ್ದರು.

ಸುಭಾಷ್‌ಚಂದ್ರ ಅವರಿಗೆ ಮಧ್ಯಂತರ ಸುರಕ್ಷತಾ ಜಾಮೀನು ನೀಡಿರುವ ನ್ಯಾಯಾಲಯವು, ವಿಚಾರಣೆಯಲ್ಲಿ ಪಾಲ್ಗೊಂಡು ಸಹಕಾರ ನೀಡುವಂತೆ ಅವರಿಗೆ ಮತ್ತು ಅವರ ಪುತ್ರ ಪುನೀತ್‌ಗೆ ಸೂಚಿಸಿದೆ. ಇಬ್ಬರೂ ತಮ್ಮ ಪಾಸ್‌ಪೋರ್ಟ್‌ಗಳನ್ನು ಪೊಲೀಸರ ವಶಕ್ಕೆ ನೀಡುವಂತೆಯೂ ನಿರ್ದೇಶಿಸಿದೆ.  ಸುದ್ದಿ ಪ್ರಕಟಣೆ ಸಂಬಂಧ ನವೀನ್ ಜಿಂದಾಲ್ ಅವರಿಗೆ ಹಣದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಝೀ ಟಿವಿ ಚಾನೆಲ್‌ನ ಸುದ್ದಿ ಸಂಪಾದಕರಾದ ಸುಧೀರ್ ಚೌಧರಿ ಮತ್ತು ಸಮೀರ್ ಅಹುವ್ಲಾಲಿಯಾ ಅವರನ್ನು ಈಗಾಗಲೇ ಬಂಧಿಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.