ADVERTISEMENT

ತಿಂಗಳೊಳಗೆ ಸರ್ಕಾರಿ ನಿವಾಸ ಬಿಟ್ಟುಕೊಡಿ

ಮಾಜಿ ಸಚಿವರು, ಸಂಸದರು- ನಿವೃತ್ತ ಅಧಿಕಾರಿಗಳಿಗೆ `ಸುಪ್ರೀಂ' ಗಡುವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 19:59 IST
Last Updated 5 ಜುಲೈ 2013, 19:59 IST

ನವದೆಹಲಿ (ಪಿಟಿಐ): ಸೇವೆಯಿಂದ ನಿವೃತ್ತಿ ಹೊಂದಿದ ಅಥವಾ ರಾಜೀನಾಮೆ ನೀಡಿದ ಸಚಿವರು, ಸಂಸದರು, ನ್ಯಾಯಮೂರ್ತಿಗಳು ಮತ್ತು ಅಧಿಕಾರಿಗಳು ತಮ್ಮ ಅಧಿಕೃತ ನಿವಾಸವನ್ನು ಒಂದು ತಿಂಗಳ ಒಳಗಾಗಿ ಬಿಟ್ಟು ಕೊಡಬೇಕೆಂದು ಸುಪ್ರೀಂಕೋರ್ಟ್ ಶುಕ್ರವಾರ ಗಡುವು ವಿಧಿಸಿದೆ.

`ಅವಧಿ ಮುಗಿದರೂ ಸರ್ಕಾರದ ಅಧಿಕೃತ ನಿವಾಸದಲ್ಲಿ ಸಚಿವರು, ಸಂಸದರು ಮತ್ತು ಅಧಿಕಾರಿಗಳು ಅಕ್ರಮವಾಗಿ ವಾಸಿಸುತ್ತಿರುವುದು ದುರದೃಷ್ಟಕರ' ಎಂದು ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಮತ್ತು ರಂಜನ್ ಗೋಗೊಯ್ ಹೇಳಿದ್ದಾರೆ.

`ಕೆಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇನ್ನೊಂದು ತಿಂಗಳು ಸಮಯ ವಿಸ್ತರಿಸಬಹುದು. ಆದರೆ, ಹುದ್ದೆಯಿಂದ ನಿರ್ಗಮಿಸಿದ ಬಳಿಕ ಒಂದು ತಿಂಗಳ ಒಳಗಾಗಿ ಮನೆ ತೆರವು ಮಾಡುವುದು ಕಡ್ಡಾಯ. ಅಕ್ರಮವಾಗಿ ವಾಸಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ನಿಯಮಗಳನ್ನು ರೂಪಿಸಬೇಕು' ಎಂದು ನ್ಯಾಯಮೂರ್ತಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಾಲಿ ಸಂಸದರಿಗೆ, ಸಚಿವರಿಗೆ ಹಂಚಿಕೆ ಮಾಡಲಾದ ನಿವಾಸದಲ್ಲಿ ಬೇರೊಬ್ಬರು ಉಳಿದುಕೊಂಡರೆ ಹಕ್ಕು ಬಾಧ್ಯತೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆ ಅಧ್ಯಕ್ಷರಿಗೆ ದೂರು ಸಲ್ಲಿಸಬಹುದು ಎಂದು ಕೋರ್ಟ್ ಹೇಳಿದೆ.

`ಸರ್ಕಾರಿ ನಿವಾಸವನ್ನು ತೆರವುಗೊಳಿಸಲು ಹಿಂದೇಟು ಹಾಕುವ ಅಧಿಕಾರಿಗಳಿಗೆ ಮೂರು ತಿಂಗಳ ನೋಟಿಸ್ ನೀಡಬೇಕು. ಒಂದುವೇಳೆ ಇದಕ್ಕೂ ಮಣಿಯದಿದ್ದಲ್ಲಿ ಬಲಪ್ರಯೋಗದ ಮೂಲಕ ಅವರನ್ನು ತೆರವುಗೊಳಿಸಬೇಕು' ಎಂದು ನ್ಯಾಯಾಲಯ ಹೇಳಿದೆ.

`ಸರ್ಕಾರದ ಅಧಿಕೃತ ನಿವಾಸದಲ್ಲಿ ಅಕ್ರಮವಾಗಿ ವಾಸಿಸುವುದೆಂದರೆ ಹಂಚಿಕೆ ಮಾಡಲಾಗಿರುವ ವ್ಯಕ್ತಿಯ ಹಕ್ಕನ್ನು ಕಬಳಿಸಿದಂತೆ' ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.