ADVERTISEMENT

ತೆಲಂಗಾಣ ಅಧಿಕೃತ ಉದಯ

ಆಂಧ್ರ ಪುನರ್‌ರಚನೆ, ರಾಷ್ಟ್ರಪತಿ ಆಡಳಿತಕ್ಕೆ ಪ್ರಣವ್‌ ಅಂಕಿತ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ತೆಲಂ­ಗಾಣ ರಚನೆಗೆ ಸಂಸತ್‌ ಅಂಗೀ­ಕರಿ­ಸಿದ ‘ಆಂಧ್ರ­ಪ್ರದೇಶ ಪುನರ್‌ರಚನೆ ಮಸೂ­ದೆ­’ ಮತ್ತು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸುವ ಕೇಂದ್ರ ಸಚಿವ ಸಂಪು­ಟದ ಶಿಫಾರಸಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಶನಿವಾರ ಅಂಕಿತ ಹಾಕಿ­ದ್ದಾರೆ.

ಈ ಮೂಲಕ ದೇಶದ 29ನೇ ರಾಜ್ಯ­ವಾಗಿ ತೆಲಂಗಾಣ ಅಧಿಕೃತವಾಗಿ ಉದ­ಯವಾಗಿದೆ. 15ನೇ ಲೋಕ­ಸಭೆಯ ಕಡೆಯ ಅಧಿವೇಶನದಲ್ಲಿ ಕೋಲಾಹಲಕ್ಕೆ ಕಾರಣವಾಗಿ ಗದ್ದಲ, ರಂಪಾಟದ ಮಧ್ಯೆಯೇ ಈ ಮಸೂದೆಗೆ ಅಂಗೀಕಾರ ದೊರಕಿತ್ತು.

ಅಖಂಡ ಆಂಧ್ರವನ್ನು ಸೀಮಾಂಧ್ರ (ಕರಾವಳಿ ಮತ್ತು ರಾಯಲಸೀಮೆ) ಮತ್ತು ತೆಲಂಗಾಣ ಎಂದು ವಿಭಜಿಸಿ ಸೀಮಾಂಧ್ರ ಭಾಗಕ್ಕೆ 13 ಜಿಲ್ಲೆಗಳು, ತೆಲಂಗಾಣಕ್ಕೆ ಹೈದರಾಬಾದ್‌ ನಗರವೂ ಸೇರಿ 10 ಜಿಲ್ಲೆಗಳನ್ನು ಸೇರಿಸಲಾಗಿದೆ.

ಆಂಧ್ರ ಇಬ್ಭಾಗದಿಂದ ಸಿಟ್ಟಿಗೆದಿರುವ ಸೀಮಾಂಧ್ರದ ಜನರನ್ನು ಸಮಾಧಾನ ಪಡಿಸಲು ಕೇಂದ್ರ ಸರ್ಕಾರ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಘೋಷಣೆ ಮಾಡಿದೆ. ಜೊತೆಗೆ ಈ ಎರಡೂ ರಾಜ್ಯಗಳ ಅಭಿವೃದ್ಧಿಗೆ ಆರು ಅಂಶಗಳ ಯೋಜನೆಯನ್ನು ಘೋಷಿಸಿದೆ.

ತೆಲಂಗಾಣ ರಚನೆ ವಿರೋಧಿಸಿ ಆಂಧ್ರ­ಪ್ರದೇಶಚ ಮುಖ್ಯಮಂತ್ರಿ ಕಿರಣ್‌ ಕುಮಾರ್‌ ಅವರ ಸರ್ಕಾರ ರಾಜೀ­ನಾಮೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸಲು ಶುಕ್ರವಾರ ಮಾಡಿದ್ದ ಶಿಫಾರಸಿಗೂ ರಾಷ್ಟ್ರಪತಿ ಶನಿವಾರ ಸಹಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.