ADVERTISEMENT

ತೆಲಂಗಾಣ: ಶ್ರೀಕೃಷ್ಣ ಸಮಿತಿ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2010, 6:45 IST
Last Updated 31 ಡಿಸೆಂಬರ್ 2010, 6:45 IST

ನವದೆಹಲಿ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತ ವರದಿಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಸಮಿತಿ ಗುರುವಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿನ ವಿವರಗಳನ್ನು ಜ.6ರವರೆಗೆ ಬಹಿರಂಗ ಮಾಡದಿರಲು ಸರ್ಕಾರ ನಿರ್ಧರಿಸಿದೆ.

ಐವರು ಸದಸ್ಯರ ಸಮಿತಿಯು ಎರಡು ಸಂಪುಟಗಳಲ್ಲಿ ಸಿದ್ಧಪಡಿಸಿರುವ ವರದಿಯನ್ನು ಮುಖ್ಯಸ್ಥರಾದ ಶ್ರೀಕೃಷ್ಣ ಅವರು ಗೃಹ ಸಚಿವ ಪಿ.ಚಿದಂಬರಂ ಅವರ ನಾರ್ತ್ ಬ್ಲಾಕ್ ಕಚೇರಿಯಲ್ಲಿ ಮಧ್ಯಾಹ್ನ 3ಕ್ಕೆ ವರದಿ ಸಲ್ಲಿಸಿದರು.

ವರದಿ ಸ್ವೀಕರಿಸಿದ ಚಿದಂಬರಂ ಮಾತನಾಡಿ, ಈ ವಿಷಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಮುನ್ನ ಕೇಂದ್ರ ಸರ್ಕಾರ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.

ADVERTISEMENT

ಆಂಧ್ರ ಪ್ರದೇಶದಲ್ಲಿ ಮಾನ್ಯತೆ ಹೊಂದಿರುವ ಎಂಟು ರಾಜಕೀಯ ಪಕ್ಷಗಳ ಮುಖಂಡರ ಜತೆ ಜ.6 ರಂದು  ಸಭೆ ನಡೆಸಲಾಗುವುದು. ಅಂದು ಸಭೆ ಮುಗಿದ ತಕ್ಷಣ ವರದಿಯಲ್ಲಿನ ಅಂಶಗಳನ್ನು ಬಹಿರಂಗ ಮಾಡಲಾಗುವುದು ಎಂದರು.

ಸಮಿತಿ ಸಲ್ಲಿಸಿರುವ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಲಿರುವ ಗೃಹ ಸಚಿವಾಲಯವು ಸಂಬಂಧಿಸಿದ ಇತರ ಇಲಾಖೆಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಿದೆ ಎಂದೂ ಅವರು ಹೇಳಿದರು.

ವರದಿ ಬಹಿರಂಗಗೊಂಡ ನಂತರ ಶಾಂತಿ, ಸಾಮರಸ್ಯ ಹಾಗೂ ಕಾನೂನು-ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದಾಗಿ ಎಲ್ಲಾ ರಾಜಕೀಯ ಪಕ್ಷಗಳೂ ಭರವಸೆ ನೀಡಿವೆ. ಅದಕ್ಕನುಗುಣವಾಗಿಯೇ ಪಕ್ಷಗಳು ನಡೆದುಕೊಳ್ಳುತ್ತವೆ ಎಂಬ ವಿಶ್ವಾಸವಿದೆ ಎಂದರು.

ಆಂಧ್ರಪ್ರದೇಶದಲ್ಲಿ ಅರೆ ಸೇನಾಪಡೆಗಳನ್ನು ನಿಯೋಜಿಸಿ ಹೆಚ್ಚಿನ ಭದ್ರತೆ ಕಲ್ಪಿಸಿರುವ ಬಗ್ಗೆ ಯಾರೂ ಭೀತರಾಗಬಾರದು. ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆಯಷ್ಟೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.