ADVERTISEMENT

ದಯಾಮರಣ ಕರಡು ಮಸೂದೆ ಸಿದ್ಧ: ಕೇಂದ್ರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 19:30 IST
Last Updated 10 ಅಕ್ಟೋಬರ್ 2017, 19:30 IST

ನವದೆಹಲಿ: ದೀರ್ಘ ಕಾಲದ ವಾಸಿಯಾಗದ ಕಾಯಿಲೆಗಳಿಂದ ಮರಣಶಯ್ಯೆಯಲ್ಲಿರುವ ರೋಗಿಗಳಿಗೆ ಪರೋಕ್ಷವಾಗಿ ಮರಣಕ್ಕೆ ಅನುವು ಮಾಡಿಕೊಡುವ ನಿಷ್ಕ್ರಿಯ ಇಚ್ಛಾಮರಣ ಅಥವಾ ದಯಾಮರಣಕ್ಕೆ ಸಂಬಂಧಿಸಿದ ಕರಡು ಮಸೂದೆಯನ್ನು ರೂಪಿಸಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ವಾಸಿಯಾಗದ ಭೀಕರ ಕಾಯಿಲೆಗೆ ತುತ್ತಾದ ಆದರೆ, ಮಾನಸಿಕವಾಗಿ ಸದೃಢವಾಗಿರುವ ವ್ಯಕ್ತಿಗೆ ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸುವ ಹಕ್ಕು ನೀಡಬೇಕು ಎಂಬ ಕೋರಿಕೆಯನ್ನು ಕೇಂದ್ರ ಸರ್ಕಾರ ಬಲವಾಗಿ ವಿರೋಧಿಸಿತು. ಇದು ದುರ್ಬಳಕೆಯಾಗುವ ಸಾಧ್ಯತೆಯೇ ಹೆಚ್ಚು ಎಂದು ವಾದಿಸಿತು.

ಕಳೆದ ವರ್ಷ ಜೂನ್‌ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಸಿದ್ಧಪಡಿಸಿದ ದಯಾಮರಣ ಕರಡು ಮಸೂದೆಯನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿ.ಎಸ್‌. ನರಸಿಂಹ ಅವರು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠಕ್ಕೆ ಸಲ್ಲಿಸಿದರು.

ADVERTISEMENT

ಭಾರತೀಯ ಕಾನೂನು ಆಯೋಗದ ವರದಿಯ ಶಿಫಾರಸುಗಳ ಆಧಾರದ ಮೇಲೆ ಈ ಕರಡು ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದರು.ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಬುಧವಾರ ಮತ್ತೆ ಕೈಗೆತ್ತಿಕೊಳ್ಳಲಿದೆ.

ಸಾವಿನ ಸನಿಹದಲ್ಲಿರುವ ಹಾಗೂ ಬದುಕುವ ಭರವಸೆ ಕ್ಷೀಣವಾಗಿರುವ ವ್ಯಕ್ತಿಗೆ ಸ್ವ ಇಚ್ಛೆಯ ದಯಾಮರಣ ಕರುಣಿಸಲು ಕರಡು ಮಸೂದೆ ಅವಕಾಶ ಕಲ್ಪಿಸಲಿದೆ.ವೈದ್ಯಕೀಯ ಚಿಕಿತ್ಸೆಯನ್ನು ರೋಗಿ ತಡೆಹಿಡಿದರೆ ಅಥವಾ ಅದರಿಂದ ಹಿಂದೆ ಸರಿದರೆ ವೈದ್ಯರಿಗೆ ಹೊಣೆಗಾರಿಕೆಯಿಂದ ರಕ್ಷಣೆ ನೀಡುವ ಮಹತ್ವದ ಅಂಶ ಈ ಮಸೂದೆಯಲ್ಲಿದೆ.

ಹಿನ್ನೆಲೆ

2008ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ 'ಕಾಮನ್ ಕಾಸ್' ಸರ್ಕಾರೇತರ ಸಂಘಟನೆಯು, ಭೀಕರ ಕಾಯಿಲೆಗೆ ತುತ್ತಾಗಿ ಚೇತರಿಕೆ ಅಸಾಧ್ಯ ಎಂಬ ಸ್ಥಿತಿಗೆ ತಲುಪಿದ ರೋಗಿಗೆ ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸುವ ಹಕ್ಕನ್ನು ನೀಡಬೇಕು. ಇಲ್ಲದೇ ಇದ್ದಲ್ಲಿ ಆತನ ವೇದನೆಯನ್ನು ಸುದೀರ್ಘಗೊಳಿಸುತ್ತದೆ ಎಂದು ವಾದಿಸಿತ್ತು.

ಕೃತಕ ಜೀವರಕ್ಷಕ ವೈದ್ಯಕೀಯ ನೆರವು ಮುಂದುವರೆಸಬಾರದು ಎಂಬ ಕೋರಿಕೆಯನ್ನು ವಿರೋಧಿಸಿದ್ದ ಕೇಂದ್ರ ಸರ್ಕಾರವು ಇದನ್ನು 'ಆತ್ಮಹತ್ಯೆ'ಗೆ ಸಮ ಎಂದು ವಾದಿಸಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕಾನೂನು ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿತ್ತು.

ಅರ್ಜಿದಾರರ ಪರ ವಕೀಲ ಪ್ರಶಾಂತ ಭೂಷಣ್ ಅವರು, ಕೃತಕ ಜೀವರಕ್ಷಕ ವೈದ್ಯಕೀಯ ಸವಲತ್ತುಗಳ ಮೂಲಕ ಸಾವಿನ ಸನಿಹದಲ್ಲಿರುವ ವ್ಯಕ್ತಿಯ ಜೀವ ರಕ್ಷಿಸುವ ಯತ್ನ ವ್ಯಕ್ತಿಯ ಸಹಜ ಆಯುಸ್ಸನ್ನು ಅಸಹಜ ರೀತಿಯಲ್ಲಿ ವೃದ್ಧಿಸುವ ಕ್ರಮವಾಗುತ್ತದೆ ಎಂದು ವಾದ ಮಂಡಿಸಿದ್ದರು.

ದಶಕಗಳ ಕಾಲ ಮರಣಶಯ್ಯೆಯಲ್ಲಿದ್ದ ಕರ್ನಾಟಕ ಮೂಲದ ಶುಶ್ರೂಷಕಿ ಮತ್ತು ಮುಂಬೈ ನಿವಾಸಿ ಅರುಣಾ ಶಾನುಭಾಗ್‌ ಅವರು ದಯಾಮರಣ ಕೋರಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, 2011ರಲ್ಲಿ ಸುಪ್ರೀಂ ಕೋರ್ಟ್ ಅರುಣಾ ಅವರ ದಯಾಮರಣ ಬೇಡಿಕೆಯನ್ನು ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.