ADVERTISEMENT

ದರ ಏರಿಕೆ ವಾಪಸಿಗೆ ಒತ್ತಾಯ: ಸಚಿವರ ರಾಜೀನಾಮೆಗೆ ಟಿಎಂಸಿ ಪಟ್ಟು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ರೈಲು ಪ್ರಯಾಣ ದರ ಏರಿಕೆ ಪ್ರಸ್ತಾವವನ್ನು ಕೈಬಿಡದಿದ್ದರೆ ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾದೀತು ಎಂಬ ಎಚ್ಚರಿಕೆಯನ್ನು ತೃಣಮೂಲ ಕಾಂಗ್ರೆಸ್ ಪಕ್ಷವು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರಿಗೆ ಬುಧವಾರ ನೀಡಿದೆ.

ದರ ಏರಿಕೆ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಟಿಎಂಸಿ ಸಂಸದರ ನಿಯೋಗವು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಗುರುವಾರ ಭೇಟಿ ಮಾಡಲಿದೆ.

`ಒಂದು ವೇಳೆ ತ್ರಿವೇದಿ ಅವರು ದರ ಏರಿಕೆಯನ್ನು ಹಿಂದಕ್ಕೆ ಪಡೆಯದಿದ್ದರೆ ರೈಲ್ವೆ ಖಾತೆಗೆ ಬೇರೊಬ್ಬರ ಹೆಸರನ್ನು ಪಕ್ಷವು ಪ್ರಸ್ತಾಪಿಸಲಿದೆ~ ಎಂದು ಲೋಕಸಭೆಯಲ್ಲಿ ಟಿಎಂಸಿ ನಾಯಕರೂ ಆಗಿರುವ ಸಚಿವ ಸುದೀಪ್ ಬಂಧೋಪಾಧ್ಯಾಯ ತಿಳಿಸಿದ್ದಾರೆ.

ADVERTISEMENT

`ಪ್ರಯಾಣ ದರ ಏರಿಕೆಯನ್ನು ವಿರೋಧಿಸಿ ಪಕ್ಷವು ಅಧಿವೇಶನದಲ್ಲಿ ಖೋತಾ ನಿರ್ಣಯ ಮಂಡಿಸಲಿದೆ~ ಎಂದೂ ಅವರು ಎಚ್ಚರಿಸಿದ್ದಾರೆ. ಇದಕ್ಕೂ ಮುನ್ನ, ಸುದ್ದಿಗಾರರೊಂದಿಗೆ ಮಾತನಾಡಿದ ಬಂಧೋಪಾಧ್ಯಾಯ, `ದರ ಏರಿಕೆ ಪ್ರಸ್ತಾವವನ್ನು ಕೈಬಿಡುವಂತೆ ಒತ್ತಾಯಿಸುತ್ತೇವೆ. ನಮ್ಮ ಪಕ್ಷ ಯಾವತ್ತೂ ಬಡವರ ಮೇಲೆ ಹೊರೆ ಹೇರುವುದಿಲ್ಲ~ ಎಂದರು. 

`ತ್ರಿವೇದಿ ನಮ್ಮ ಪಕ್ಷದವರೇ ಆದರೂ ಸಚಿವರಾಗಿ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಿದ್ದಾರೆ~ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, `ದರ ಏರಿಕೆಯನ್ನು ಸರ್ಕಾರ ಹಿಂಪಡೆಯುತ್ತದೆ ಎಂಬ ಭರವಸೆ ನಮಗಿದೆ. ಆದರೆ, ನಾವು ಮಾತ್ರ ನಮ್ಮ ಒತ್ತಾಯದಿಂದ ಹಿಂದೆ ಸರಿಯುವುದಿಲ್ಲ~ ಎಂದರು.

ಈ ಮಧ್ಯೆ, ದರ ಏರಿಕೆಯನ್ನು ಖಂಡಿಸಿರುವ ಟಿಎಂಸಿ ಸಂಸದರು; ಬಜೆಟ್ ಮಂಡನೆ ನಂತರ ತ್ರಿವೇದಿ ಅವರನ್ನು ಭೇಟಿ ಮಾಡಿ ಏರಿಕೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ. ಆದರೆ, ಇದೇ ಪಕ್ಷದ ಮುಖಂಡ, ಕೇಂದ್ರ ಸಚಿವ ಸುಲ್ತಾನ್ ಅಹ್ಮದ್ ಏರಿಕೆ ಸಮರ್ಥಿಸಿಕೊಂಡಿದ್ದಾರೆ.

ದರ ಏರಿಕೆ: ತ್ರಿವೇದಿ ಸಮರ್ಥನೆ

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ಸಂಸದರೇ ಪ್ರಯಾಣ ದರ ಏರಿಕೆ ಪ್ರಸ್ತಾವವನ್ನು ವಿರೋಧಿಸಿರುವುದರಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ರೈಲ್ವೆ ಸಚಿವ ದಿನೇಶ್ ತ್ರಿವೇದಿ, ಇಲಾಖೆ ಹಿತ ಕಾಪಾಡುವ ಉದ್ದೇಶದಿಂದ ಸ್ವಲ್ಪಮಟ್ಟಿಗೆ ದರ ಏರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ರೈಲ್ವೆ ಇಲಾಖೆಯನ್ನು ತೀವ್ರ ನಿಗಾ ಘಟಕದಿಂದ (ಐಸಿಯು) ಹೊರ ತಂದಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ ಅವರು, ಅನಿಲ್ ಕಾಕೋಡ್ಕರ್ ಸಮಿತಿ ಮತ್ತು ಸ್ಯಾಂ ಪಿತ್ರೋಡ ಅವರ ಸಮಿತಿ ನೀಡಿರುವ ಶಿಫಾರಸುಗಳ ಅನ್ವಯವೇ ಪ್ರಯಾಣ ದರ ಏರಿಸುವ ಪ್ರಸ್ತಾವ ಮಾಡಿರುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.