ADVERTISEMENT

ದಿಕ್ಸೂಚಿ ಚುನಾವಣೆ ಇಂದು ಫಲಿತಾಂಶ

ಪಿಟಿಐ
Published 11 ಡಿಸೆಂಬರ್ 2018, 2:56 IST
Last Updated 11 ಡಿಸೆಂಬರ್ 2018, 2:56 IST
   

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ 8,500ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ. 1.74 ಲಕ್ಷ ಮತಯಂತ್ರಗಳಲ್ಲಿರುವ ಮತಗಳ ಎಣಿಕೆ ಮಂಗಳವಾರ ಬೆಳಿಗ್ಗೆ ಎಂಟು ಗಂಟೆಗೆ ಆರಂಭವಾಗಲಿದೆ. ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ.

2019ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಈ ಐದು ರಾಜ್ಯಗಳ ಫಲಿತಾಂಶವನ್ನು ಬಣ್ಣಿಸಲಾಗಿದೆ. ಹಾಗಾಗಿ, ಫಲಿತಾಂಶದ ಬಗ್ಗೆ ದೇಶದಾದ್ಯಂತ ಭಾರಿ ಕುತೂಹಲ ಇದೆ.

ಐದು ರಾಜ್ಯಗಳ ಪೈಕಿ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಬಿಜೆಪಿಗೆ ಈ ರಾಜ್ಯಗಳಲ್ಲಿ ಗೆಲ್ಲುವುದು ಬಹಳ ಮುಖ್ಯ. ಮಿಜೋರಾಂನಲ್ಲಿ ಎರಡು ಅವಧಿಯಿಂದ ಕಾಂಗ್ರೆಸ್‌ ಆಳ್ವಿಕೆ ಇದೆ. ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡುವ ಮೊದಲು ಟಿಆರ್‌ಎಸ್‌ ಆಡಳಿತ ಇತ್ತು.

ADVERTISEMENT

ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಬರಲು ಮತ್ತು ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಈ ಮೂರು ರಾಜ್ಯಗಳಿಂದ ಬಿಜೆಪಿಗೆ ಗಣನೀಯ ಕೊಡುಗೆ ಸಿಕ್ಕಿತ್ತು. ಈ ರಾಜ್ಯಗಳಲ್ಲಿನ 65 ಲೋಕಸಭಾ ಸ್ಥಾನಗಳಲ್ಲಿ 62ರಲ್ಲಿ ಬಿಜೆಪಿ ಗೆದ್ದಿತ್ತು. ಹಾಗಾಗಿ ಈ ರಾಜ್ಯಗಳಲ್ಲಿ ಗೆಲ್ಲುವುದು ಬಿಜೆಪಿ
ಮತ್ತು ಕಾಂಗ್ರೆಸ್‌ ಪಕ್ಷಗಳೆರಡಕ್ಕೂ ನಿರ್ಣಾಯಕ.

ಈಶಾನ್ಯ ಭಾರತದ ರಾಜ್ಯಗಳ ಪೈಕಿ ಮಿಜೋರಾಂ ಬಿಟ್ಟರೆ ಬೇರೆಲ್ಲೂ ಕಾಂಗ್ರೆಸ್‌ ಸರ್ಕಾರ ಇಲ್ಲ. ಹಾಗಾಗಿಯೇ ‘ಕಾಂಗ್ರೆಸ್‌ಮುಕ್ತ ಈಶಾನ್ಯ’ ಮಾಡಬೇಕು ಎಂದು ಬಿಜೆಪಿ ಹೊರಟಿದೆ. ಮಿಜೋರಾಂನಲ್ಲಿ ಅಧಿಕಾರ ಉಳಿಸಿಕೊಂಡು ಈಶಾನ್ಯದ ಒಂದು ರಾಜ್ಯದಲ್ಲಿಯಾದರೂ ಅಧಿಕಾರದಲ್ಲಿರುವುದು ಕಾಂಗ್ರೆಸ್‌ನ ಕನಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.