ADVERTISEMENT

ದೀದಿ ಹೇಳಿಕೆಗೆ ವ್ಯಾಪಕ ಖಂಡನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 19:30 IST
Last Updated 15 ಆಗಸ್ಟ್ 2012, 19:30 IST

ಕೋಲ್ಕತ್ತಾ (ಪಿಟಿಐ): `ನ್ಯಾಯಾಲಯದ ತೀರ್ಪುಗಳನ್ನೂ ಹಣ ಕೊಟ್ಟು ಕೊಂಡು ಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ ತುಂಬಿದೆ~ ಎಂಬ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ರಾಜಕೀಯ ಪಕ್ಷಗಳು, ವಕೀಲರು, ಕಾನೂನು ತಜ್ಞರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

 

ಮಮತಾ ಹೇಳಿದ್ದೇನು?
ಪಶ್ಚಿಮ ಬಂಗಾಳದ ವಿಧಾನಸಭೆಯ 75ನೇ ವರ್ಷಾಚರಣೆ ಅಂಗವಾಗಿ ಮಂಗಳವಾರ ಸದನದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು `ಅನೇಕ ಪ್ರಕರಣಗಳಲ್ಲಿ ನ್ಯಾಯದಾನಕ್ಕಾಗಿ ನ್ಯಾಯಾಧೀಶರು ಹಣ ಪಡೆಯುತ್ತಾರೆ. ನ್ಯಾಯಾಂಗದಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸಭಾಪತಿಯವರು ಸದನದಲ್ಲಿ ಈ ಹೇಳಿಕೆ ನೀಡಲು ಅವಕಾಶ ಕೊಡಬೇಕು. ಒಂದೊಮ್ಮೆ ನನ್ನ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದರೂ ಪರವಾಗಿಲ್ಲ. ಸಂತೋಷದಿಂದ ಸ್ವೀಕರಿಸುತ್ತೇನೆ. ಮಾನಹಾನಿ ಮೊಕದ್ದಮೆ ದಾಖಲಿಸಿ, ಬಂಧಿಸಿದರೂ ಚಿಂತೆಯಿಲ್ಲ~ ಎಂದಿದ್ದರು.
ಘನತೆಗೆ ತಕ್ಕುದ್ದಲ್ಲ: ಹೆಗ್ಡೆ
ಬೆಂಗಳೂರು (ಪಿಟಿಐ):  ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆ ಅವರ ಘನತೆಗೆ ತಕ್ಕದಲ್ಲ ಎಂದು ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.
`ಮಮತಾ ಬ್ಯಾನರ್ಜಿ ಅವರು ಹೇಳಿಕೆ ನೀಡುವ ಬದಲಿಗೆ ಈ ವಿಷಯವನ್ನು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ಗಮನಕ್ಕೆ ತರಬಹುದಿತ್ತು~ ಎಂದಿದ್ದಾರೆ.
`ಸಾಂವಿಧಾನಿಕ ಸ್ಥಾನಮಾನ ಹೊಂದಿರದ ವ್ಯಕ್ತಿಗಳು ಇಂತಹ ಹೇಳಿಕೆ ನೀಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಆದರೆ, ಮುಖ್ಯಮಂತ್ರಿ ಹುದ್ದೆಯಲ್ಲಿರುವವರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ~ ಎಂದರು.

`ಮಮತಾ ಅವರು ನ್ಯಾಯಾಂಗದ ಮೇಲೆ ಮಾಡಿರುವ ಆರೋಪ ಸಿಂಧುವಲ್ಲ~ ಎಂದು ಬಿಜೆಪಿ ವಾದಿಸಿದ್ದರೆ, ಸಿಪಿಎಂ, `ದೀದಿ~ ಹೇಳಿಕೆಯನ್ನು `ಸಾಂವಿಧಾನಿಕ ಸಂಸ್ಥೆಯ ಮೇಲೆ ಒತ್ತಡ ಹೇರುವ ತಂತ್ರ~ ಎಂದು ಟೀಕಿಸಿದೆ.

ಮಮತಾ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. `ಇದು ಇಡೀ ನ್ಯಾಯಾಂಗದ ವಿರುದ್ಧ ಮಾಡಲಾದ ಆರೋಪ. ಮುಖ್ಯಮಂತ್ರಿಯೊಬ್ಬರು ಇಂತಹ ಆರೋಪ ಮಾಡಿರುವುದು ಬೇಜವಾಬ್ದಾರಿತನ ವರ್ತನೆಯಾಗಿದೆ~ ಎಂದು ಸುಪ್ರೀಂಕೊರ್ಟ್ ವಕೀಲರ ಸಂಘದ ಅಧ್ಯಕ್ಷ ಪ್ರವೀಣ್ ಪಾರೇಖ್ ಹೇಳಿದ್ದಾರೆ.

ಮಮತಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್, `ಅವರು ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಈ ಹೇಳಿಕೆ ನೀಡಿದ್ದಾರೆಂದು ತಿಳಿದಿಲ್ಲ.  ಅವರ ಹೇಳಿಕೆಯಿಂದ ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಿಸುವ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ~ ಎಂದು ಹೇಳಿದ್ದಾರೆ.


`ಮಮತಾ, ಜವಾಬ್ದಾರಿ ಮೀರಿ ವರ್ತಿಸಿದ್ದಾರೆ. ನ್ಯಾಯಾಂಗದ ಮೇಲೆ ಆರೋಪ ಹೊರಿಸುವುದು ಅವರ ಹುದ್ದೆಗೆ ಗೌರವ ತರುವಂಥದ್ದಲ್ಲ~ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಬಲಬೀರ್ ಪುಂಜ್ ಹೇಳಿದ್ದಾರೆ. `ತಮ್ಮ ಹೇಳಿಕೆಗೆ ಅವರು ಬದ್ಧರಾಗಿದ್ದರೆ, ಅಂಥ ಪ್ರಕರಣಗಳ ಕುರಿತ ದಾಖಲೆ ಒದಗಿಸಬೇಕೆಂದು~ ಒತ್ತಾಯಿಸಿದ್ದಾರೆ.

ಮಮತಾ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ಕಿಡಿ ಕಾರಿರುವ ಸಿಪಿಎಂ ನಾಯಕ ಮೊಹಮ್ಮದ್ ಸಲೀಂ, `ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು, ಸದನದ ಒಳಗೆ ಈ ಪ್ರಕರಣವನ್ನು ಎತ್ತಿರುವುದರಿಂದ, ಎಲ್ಲ ಸದಸ್ಯರೂ ಇಕ್ಕಟ್ಟಿಗೆ ಸಿಲುಕಿದಂತಾಗಿದೆ~ ಎಂದು ಹೇಳಿದ್ದಾರೆ.

ಮಮತಾ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾನೂನು ತಜ್ಞ ಸೋಲಿ ಸೊರಾಬ್ಜಿ, `ಯಾವ ಪ್ರಕರಣವನ್ನು ಮಮತಾ ಹಣ ನೀಡಿ ಗೆದ್ದಿದ್ದಾರೆ. ನ್ಯಾಯಾಧೀಶರಿಗೆ ಯಾರು ಹಣ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿರದ ಹಿನ್ನೆಲೆಯಲ್ಲಿ ಒಟ್ಟಾರೆ  ಈ ಆರೋಪವೇ ಅಸಂಬದ್ಧವಾಗಿದೆ ಎಂಬುದನ್ನು ತೋರಿಸುತ್ತದೆ. ಇಂಥ ಹೇಳಿಕೆಗಳಿಂದ ತುಂಬಾ ನೋವಾಗಿದೆ~ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

`ಇಂಥ ಹೇಳಿಕೆಗಳು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ನಮ್ಮ ಸಂವಿಧಾನಕ್ಕೆ ದೊಡ್ಡ ಗಂಡಾಂತರ ಎದುರಾಗುವುದು ಖಚಿತ~ ಎಂದು ಮತ್ತೊಬ್ಬ ಕಾನೂನು ತಜ್ಞ ಹರೀಶ್ ಸಾಳ್ವೆ ಕಿಡಿಕಾರಿದ್ದಾರೆ.

ADVERTISEMENT


`ಇದೊಂದು ಬೇಜವಾಬ್ದಾರಿತನದ ಹೇಳಿಕೆ. ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಅವರಿಂದ ಇಂಥ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ~ ಎಂದು ಪಶ್ಚಿಮ ಬಂಗಾಳದ ಕಾನೂನು ತಜ್ಞ ಪಿ.ಪಿ.ರಾವ್ ಹೇಳಿದ್ದಾರೆ.


ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕ ಪ್ರದೀಪ್ ಭಟ್ಟಾಚಾರ್ಯ ಅವರು, `ಒಮ್ಮಮ್ಮೆ ತಾವು ಯಾವ ಸ್ಥಾನದಲ್ಲಿ ಇದ್ದೇವೆ ಎಂಬುದನ್ನು ಮರೆತು ಮಾತನಾಡುತ್ತೇವೆ~ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. `ನಾವು ರಾಜಕಾರಣಿಗಳು. ಹೀಗಾಗಿ ಏನು ಹೇಳಬೇಕು ಅಂತ ಅಂದುಕೊಂಡಿರುತ್ತೇವೆಯೋ ಅದನ್ನೇ ಹೇಳುತ್ತೇವೆ~ ಎಂದೂ ಕುಟುಕಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.