ಭಟ್ಕಳ: ಧಾರವಾಡ ಕಾರಾಗೃಹದಿಂದ ಪರಾರಿಯಾಗಿದ್ದ ಕಮ್ಮರಡಿ ಹನೀಫ್‌ನನ್ನು ಬಂಧಿಸಿದ ಭಟ್ಕಳದ ಪೊಲೀಸರಿಗೆ ಆತ ವಿಚಾರಣೆ ಸಂದರ್ಭದಲ್ಲಿ ಹಲವು ಮಹತ್ವದ ವಿಷಯಗಳನ್ನು ತಿಳಿಸಿದ್ದಾನೆ ಎನ್ನಲಾಗಿದೆ.
ಉಡುಪಿ ಮೂಲಕ ಮಂಗಳೂರಿಗೆ ತೆರಳಿ ಅಲ್ಲಿಂದ ಮುಂಬೈಗೆ ಹೋಗಿ, ಸ್ವಲ್ಪ ದಿನಗಳ ನಂತರ ದುಬೈಗೆ ತೆರಳಲು ಸಂಚು ಹೂಡಿದ್ದ ಎಂದು ತಿಳಿದುಬಂದಿದೆ. ಈತನ ಸ್ನೇಹಿತ ಹೆಬ್ಬೆಟ್ ಮಂಜ ಕೂಡ ದುಬೈನಲ್ಲಿ ಇರುವುದರಿಂದ ಅಲ್ಲಿಗೆ ತೆರಳಲು ಹನೀಫ್ ಯೋಜಿಸಿದ್ದ ಎನ್ನಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾ.ಪಂ.ಅಧ್ಯಕ್ಷ ಹೊಸಳ್ಳಿ ವೆಂಕಟೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಹನೀಫ್, ಇನ್ನೂ ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂದು ಪರಾರಿಯಾಗಿ ದೇಶ ತೊರೆಯಲು ಉದ್ದೇಶಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ನೆಲಮಂಗಲದ ಜೆಡಿಎಸ್ ಮುಖಂಡ ಹಾಗೂ ಜಿ.ಪಂ ಸದಸ್ಯ ಕೃಷ್ಣಪ್ಪನ ಹತ್ಯೆಗೂ ತನಗೂ ಸಂಬಂಧವಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ. ಆ ಕೊಲೆಗೆ ಸುಪಾರಿ ಕೊಟ್ಟವನೂ ತಾನಲ್ಲ. ಕೃಷ್ಣಪ್ಪ ಹಾಗೂ ಸೀನ ಎಂಬುವವರು ಪರಸ್ಪರ ದ್ವೇಷಿಸುತ್ತಿದ್ದರು ಎಂದು ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.
ದಕ್ಷಿಣ ಕನ್ನಡದ ಪಡುಬಿದ್ರೆಯ ಜೆಡಿಎಸ್ ಮುಖಂಡ ಗುಲಾಂ ಅವರಿಗೆ ಹಣ ನೀಡುವಂತೆ ಪೋನ್ ಮಾಡಿ ಬೆದರಿಕೆ ಹಾಕಿದ್ದು ನಿಜ ಎಂದು ಒಪ್ಪಿಕೊಂಡಿರುವ ಆತ ಕೈದಿ ಹನೀಫ್, ಬೆಳಗಾವಿ ಜೈಲಿನಲ್ಲಿರುವ ಹಿರಿಯಡ್ಕ ಸಂತೋಷ ಎಂಬಾತ ಗುಲಾಂ ನಂಬರ್ ಕೊಟ್ಟು ಬೆದರಿಕೆ ಹಾಕಲು ಹೇಳಿದ್ದರಿಂದ ಆ ರೀತಿ ಮಾಡಿದೆ ಎಂದಿದ್ದಾನೆ.
ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.