ADVERTISEMENT

ದೆಹಲಿ ಸಾಮೂಹಿಕ ಅತ್ಯಾಚಾರ: ತೀರ್ಪು ಕಾದಿರಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 11:29 IST
Last Updated 3 ಜನವರಿ 2014, 11:29 IST

ನವದೆಹಲಿ (ಐಎಎನ್ಎಸ್): 2012ರ ಡಿಸೆಂಬರ್ 16 ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಆಪಾದಿತರಿಗೆ ವಿಧಿಸಲಾದ ಮರಣದಂಡನೆಯನ್ನು ದೃಢ ಪಡಿಸುವುದಕ್ಕೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಕಾಯ್ದಿರಿಸಿತು.

ನ್ಯಾಯಮೂರ್ತಿ ರೇವಾ ಖೇತ್ರಪಾಲ್ ಮತ್ತು ನ್ಯಾಯಮೂರ್ತಿ ಪ್ರತಿಭಾ ರಾಣಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರು ತಮ್ಮ ಅಹವಾಲುಗಳನ್ನು ಮಂಡಿಸಿದ ಬಳಿಕ ನಾಲ್ವರು ಆರೋಪಿಗಳಿಗೆ ವಿಧಿಸಲಾದ ಮರಣದಂಡನೆ ದೃಢ ಪಡಿಸುವುದಕ್ಕೆ ಸಂಬಂಧಿಸಿದಂತೆ ತಮ್ಮ ತೀರ್ಪನ್ನು ಕಾಯ್ದಿರಿಸಿರುವುದಾಗಿ ಪ್ರಕಟಿಸಿತು.

ಲಿಖಿತ ಅಹವಾಲುಗಳುನ್ನು ಜನವರಿ 15ರ ಒಳಗಾಗಿ ಸಲ್ಲಿಸುವಂತೆಯೂ ಆರೋಪಿಗಳ ಪರ ವಕೀಲರಿಗೆ ನ್ಯಾಯಾಲಯವು ಸೂಚಿಸಿತು.

23ರ ಹರೆಯದ ಫಿಸಿಯೋಥೆರಪಿ ವಿದ್ಯಾರ್ಥಿನಿ ಮೇಲೆ 2012ರ ಡಿಸೆಂಬರ್ 16ರಂದು ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರು ಮಂದಿ, ಆಕೆಯ ಮೇಲೆ ಭೀಕರ ಲೈಂಗಿಕ ಹಲ್ಲೆ ನಡೆಸಿದ್ದರು. ಆರೋಪಿಗಳ ಪೈಕಿ ಒಬ್ಬ ಅಪ್ರಾಪ್ತ ವಯಸ್ಕನೂ ಸೇರಿದ್ದ.

ಈ ಕೃತ್ಯದ ಬಳಿಕ ಆರೋಪಿಗಳು ಡಿಸೆಂಬರ್ ತಿಂಗಳ ಗಡ ಗಡ ನಡುಗುವ ಚಳಿಯಲ್ಲಿ ಸಾಯಲೆಂದು ನತದೃಷ್ಟ ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯನನ್ನು ವಿವಸ್ತ್ರಗೊಳಿಸಿ ಬಸ್ಸಿನಿಂದ ಹೊರಕ್ಕೆ ತಳ್ಳಿದ್ದರು.

ಬಳಿಕ ಆಸ್ಪತ್ರೆಗೆ ಸೇರಿಸಲಾಗಿದ್ದ ವಿದ್ಯಾರ್ಥಿನಿ ತೀವ್ರ ಗಾಯಗಳ ಪರಿಣಾಮವಾಗಿ 2012ರ ಡಿಸೆಂಬರ್ 29ರಂದು ವಿಶೇಷ ಚಿಕಿತ್ಸೆಗಾಗಿ ರವಾನಿಸಲಾಗಿದ್ದ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಅಸು ನೀಗಿದ್ದರು.

ನಂತರ ಆರು ಮಂದಿ ಆರೋಪಿಗಳ ಪೈಕಿ ಒಬ್ಬ ದೆಹಲಿಯ ತಿಹಾರ್ ಸೆರೆಮನೆಯಲ್ಲಿ ಮೃತನಾಗಿದ್ದ. ಅಪ್ರಾಪ್ತ ವಯಸ್ಕನನ್ನು ಆಗಸ್ಟ್ 31ರಂದು ಬಾಲ ನ್ಯಾಯಮಂಡಳಿಯು ಮೂರು ವರ್ಷಗಳ ಅವಧಿಗಾಗಿ ಸುಧಾರಣಾ ಗೃಹಕ್ಕೆ ಕಳುಹಿಸಿತ್ತು.

ವಿಚಾರಣಾ ನ್ಯಾಯಾಲಯವು ಸೆಪ್ಟೆಂಬರ್ 13ರಂದು ಮುಖೇಶ್ (26), ಅಕ್ಷಯ ಥಾಕೂರ್ (28), ಪವನ್ ಗುಪ್ತಾ (19) ಮತ್ತು ವಿನಯ್ ಶರ್ಮಾ (20) ಈ ಆರೋಪಿಗಳಿಗೆ ಮರಣದಂಡನೆ ವಿಧಿಸಿತ್ತು.

ಶಿಕ್ಷೆಯನ್ನು ದೃಢಪಡಿಸುವ ಸಲುವಾಗಿ ನ್ಯಾಯಾಲಯವು ಪ್ರಕರಣವನ್ನು ಹೈಕೋರ್ಟ್ ಗೆ ಒಪ್ಪಿಸಿತ್ತು.

ಕಳೆದ ವರ್ಷ ಜನವರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

'ಪ್ರಜಾವಾಣಿ' ಅಂತರ್ಜಾಲ 2012ರ ಡಿಸೆಂಬರ್ 17ರಂದು ಈ ಸಂಬಂಧ ಪ್ರಕಟಿಸಿದ್ದ ವರದಿಯ ಕೊಂಡಿ ಇಲ್ಲಿದೆ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.