ADVERTISEMENT

ದೇಶಭಕ್ತಿಯೆ ಜನಸೇವೆಗೆ ಪ್ರೇರಣೆ: ನರೇಂದ್ರ ಮೋದಿ

ಪಿಟಿಐ
Published 4 ಡಿಸೆಂಬರ್ 2017, 5:46 IST
Last Updated 4 ಡಿಸೆಂಬರ್ 2017, 5:46 IST
ದೇಶಭಕ್ತಿಯೆ ಜನಸೇವೆಗೆ ಪ್ರೇರಣೆ: ನರೇಂದ್ರ ಮೋದಿ
ದೇಶಭಕ್ತಿಯೆ ಜನಸೇವೆಗೆ ಪ್ರೇರಣೆ: ನರೇಂದ್ರ ಮೋದಿ   

ಅಹಮದಾಬಾದ್‌: ಕ್ರೈಸ್ತರು ಸೇರಿದಂತೆ ಇತರ ಹಲವು ನಂಬಿಕೆಗಳನ್ನು ಹೊಂದಿರುವ ಜನರ ಸೇವೆ ಮಾಡಲು ದೇಶಭಕ್ತಿಯೆ ಪ್ರೇರಣೆ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಗಾಂಧಿನಗರದ ಆರ್ಚ್‌ಬಿಷಪ್‌ ಬರೆದಿರುವ ಪತ್ರವನ್ನು ನೇರವಾಗಿ ಉಲ್ಲೇಖಿಸದ ಅವರು ಪತ್ರದಲ್ಲಿನ ‘ರಾಷ್ಟ್ರೀಯವಾದಿ ಶಕ್ತಿಗಳಿಂದ ದೇಶವನ್ನು ರಕ್ಷಿಸಿ’ ಎಂಬ ಮಾತಿಗೆ ಪ್ರತಿಕ್ರಿಯಿಸಿದರು.

ಸ್ವಾಮಿನಾರಾಯಣ ಗುರುಕುಲ ವಿಶ್ವವಿದ್ಯಾ ಪ್ರತಿಷ್ಠಾನ ಅಹಮದಾಬಾದ್‌ನಲ್ಲಿ ನಿರ್ಮಿಸಿರುವ ಆಸ್ಪತ್ರೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಆರ್ಚ್‌ಬಿಷಪ್‌ ಥಾಮಸ್‌ ಮ್ಯಾಕನ್‌ ನವೆಂಬರ್‌ನಲ್ಲಿ ಸಮುದಾಯದ ಜನರಿಗೆ ಬಹಿರಂಗ ಪತ್ರ ಹೊರಡಿಸಿ, ‘ನಮ್ಮ ದೇಶದ ಜ್ಯಾತ್ಯತೀತ ಮತ್ತು ಪ್ರಜಾಸತ್ತಾತ್ಮಕತೆ ಸಡಿಲಗೊಳ್ಳುತ್ತಿದೆ. ರಾಷ್ಟ್ರೀಯವಾದಿ ಶಕ್ತಿಗಳಿಂದ ದೇಶವನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿ’ ಎಂದು ಮನವಿ ಮಾಡಿದ್ದರು.

‘ಧಾರ್ಮಿಕ ವ್ಯಕ್ತಿಯೊಬ್ಬ ಫತ್ವಾ ಹೊರಡಿಸಿ ರಾಷ್ಟ್ರೀಯವಾದಿ ಶಕ್ತಿಗಳನ್ನು ಕಿತ್ತೊಗೆಯಿರಿ ಎಂದೇಳುತ್ತಾರೆ. ಇದನ್ನು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ಭಾರತೀಯರ ಸೇವೆ ಮಾಡಲು ಅದೇ ದೇಶಭಕ್ತಿ ನಮ್ಮನ್ನು ಪ್ರೇರೇಪಿಸುತ್ತಿದೆ’ ಎಂದು ಮೋದಿ ಹೇಳಿದರು.

‘ದೇಶಭಕ್ತಿ ಮೌಲ್ಯದ ಕುರಿತ ಇಂತಹ ಹೇಳಿಕೆಗಳು ನಮ್ಮಲ್ಲಿ ಕಳವಳ ಉಂಟುಮಾಡುತ್ತವೆ’ ಎಂದರು.

ಈ ಬಗೆಯ ಪತ್ರ ಬರೆದಿರುವ ಆರ್ಚ್‌ಬಿಷಪ್‌ ಥಾಮಸ್‌ ಮ್ಯಾಕನ್‌ ಅವರಿಗೆ ಗುಜರಾತ್‌ ಚುನಾವಣಾ ಆಯೋಗ ನೋಟಿಸ್‌ ಕಳುಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.