ADVERTISEMENT

ದೌರ್ಜನ್ಯಕ್ಕೆ ಸುಪ್ರೀಂ ಕೋಪ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ನವದೆಹಲಿ: ಯೋಗಗುರು ಬಾಬಾ ರಾಮ್‌ದೇವ್ ಮತ್ತು ಅವರ ಶಿಷ್ಯರನ್ನು ರಾಮಲೀಲಾ ಮೈದಾನದಿಂದ ಹೊರ ಹಾಕಿದ ಘಟನೆಗೆ  ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿದ್ದು, `ಬಲ ಪ್ರಯೋಗ~ ಮಾಡಿರುವುದಕ್ಕೆ ಕಾರಣ ನೀಡುವಂತೆ ಕೇಂದ್ರದ ಯುಪಿಎ ಸರ್ಕಾರಕ್ಕೆ ಸೋಮವಾರ ತಾಕೀತು ಮಾಡಿದೆ.

`ವಿದೇಶಿ ಬ್ಯಾಂಕ್ ಖಾತೆಯಲ್ಲಿರುವ ಕಪ್ಪು ಹಣ ವಾಪಸ್ ತರುವಂತೆ ಆಗ್ರಹಿಸಲು ಸತ್ಯಾಗ್ರಹ ನಡೆಸಿದವರ ಮೇಲೆ ಪೊಲೀಸರ ದೌರ್ಜನ್ಯ ನಡೆದಿದ್ದೇಕೆ~ ಎಂದು ವಿವರಣೆ ಕೊಡುವಂತೆ ನ್ಯಾ. ಬಿ.ಎಸ್. ಚೌಹಾಣ್ ಮತ್ತು ನ್ಯಾ. ಸ್ವತಂತ್ರ ಕುಮಾರ್ ಅವರನ್ನೊಳಗೊಂಡ ರಜಾ ಕಾಲಾದ ನ್ಯಾಯಪೀಠ ಸರ್ಕಾರಕ್ಕೆ ಸೂಚಿಸಿದೆ.

ಭಾನುವಾರ ಬೆಳಗಿನ ಘಟನೆ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಪರಿಗಣಿಸಿದ ನ್ಯಾಯಪೀಠ ಸ್ವಯಂಪ್ರೇರಿತವಾಗಿ ಕೇಂದ್ರ ಗೃಹ ಕಾರ್ಯದರ್ಶಿ, ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ದೆಹಲಿ ಪೊಲೀಸ್ ಕಮಿಷನರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಎರಡು ವಾರಗಳಲ್ಲಿ ನೋಟಿಸ್‌ಗೆ ಉತ್ತರಿಸುವಂತೆ ಆದೇಶಿಸಿದೆ.

ಬಾಬಾ ಬೇಡಿಕೆ ಬೆಂಬಲಿಸಿ ಆಮರಣ ಉಪವಾಸ ನಡೆಸುತ್ತಿದ್ದ ಜನರ ಮೇಲೆ ಮಧ್ಯರಾತ್ರಿ ದೌರ್ಜನ್ಯ ನಡೆಸಿದ್ದೇಕೆ ಎಂದು ವಿವರಣೆ ಕೊಡುವಂತೆ ಕೇಳಲಾಗಿದೆ. ಜನರ ಮೇಲೆ ಬಲ ಪ್ರಯೋಗ ಮಾಡಿದ ಕ್ರಮ ನ್ಯಾಯಾಲಯದ ಕಳವಳಕ್ಕೆ ಕಾರಣವಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ರಾಮಲೀಲಾ ಮೈದಾನದಲ್ಲಿ ಶಾಂತಿಯುತ ಚಳವಳಿ ನಡೆಸುತ್ತಿದ್ದ ಜನರನ್ನು ಬಲವಂತವಾಗಿ ಹೊರ ಹಾಕಿದ್ದು ಮೂಲಭೂತ ಹಕ್ಕಿನ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ವಕೀಲ ಅಜಯ್ ಅಗರವಾಲ್ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಪೀಠ ತಳ್ಳಿಹಾಕಿತು. ಇಡೀ ಘಟನೆ ಕುರಿತು ಶ್ವೇತಪತ್ರ ಹೊರತರಬೇಕು ಎಂದು ಸೂಚಿಸುವಂತೆ ಅರ್ಜಿದಾರರು ಕೇಳಿದ್ದರು. ಅರ್ಜಿಯನ್ನು ವಿಚಾರಣೆ ತೆಗೆದುಕೊಳ್ಳುವ ಮೊದಲೇ ವಿವರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕುರಿರು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಅರ್ಜಿಯಲ್ಲಿ ಇರುವ ಅಂಶಗಳು ಹಾಗೂ ವಿವರಗಳು ವಿಚಾರಣೆಗೆ ಮೊದಲೇ ಮಾಧ್ಯಮಗಳಲ್ಲಿ ಪ್ರಕಟ ಆಗಿರುವ ಕುರಿತು ಅಚ್ಚರಿ ಆಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಅರ್ಜಿ ರಿಜಿಸ್ಟರ್ ಆಗುವ ಮೊದಲೇ ವಿವರಗಳು ಪ್ರಕಟಗೊಂಡಿವೆ. ವಿವರಗಳನ್ನು ಯಾರು ಬಹಿರಂಗ ಮಾಡಿದರೆಂದು ತನಿಖೆ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.