ADVERTISEMENT

ಧಾರ್ಮಿಕ ಕಟ್ಟಡಗಳ ಸಮೀಕ್ಷಾ ವರದಿ ಸಲ್ಲಿಸಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ನವದೆಹಲಿ (ಪಿಟಿಐ): ರಾಜ್ಯದಲ್ಲಿ 2002ರ ಕೋಮುಗಲಭೆಯ ಸಂದರ್ಭದಲ್ಲಿ ಧ್ವಂಸಗೊಂಡ ಮತ್ತು ಹಾನಿಗೊಳಗಾದ ಧಾರ್ಮಿಕ ಕಟ್ಟಡಗಳ ಬಗ್ಗೆ ಕೈಗೊಂಡ ಸಮೀಕ್ಷೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನಿಡಿದೆ.

ಇಂಥ ಧಾರ್ಮಿಕ ಕಟ್ಟಡಗಳ ಪುನರ್ ನಿರ್ಮಾಣ ಮತ್ತು ದುರಸ್ತಿಗೆ ಬೇಕಾಗುವ ಅಂದಾಜು ಮೊತ್ತವನ್ನು ತಿಳಿಸುವಂತೆ ಕೆ.ಎಸ್. ರಾಧಾಕೃಷ್ಣನ್ ಮತ್ತು ದಿಪಕ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠ ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ.

ಕೋಮುಗಲಭೆಯ ವೇಳೆ ಹಾನಿಗೊಳಗಾದ ಮತ್ತುಧ್ವಂಸಗೊಂಡ ಧಾರ್ಮಿಕ ಕಟ್ಟಡಗಳಿಗೆ ಪರಿಹಾರ ನೀಡುವಂತೆ ಗುಜರಾತ್ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ. ರಾಜ್ಯ ಬೊಕ್ಕಸದ ಹಣವನ್ನು ಪ್ರಾರ್ಥನಾ ಅಥವಾ ಧಾರ್ಮಿಕ ಕಟ್ಟಡಗಳ ಪುನರ್ ನಿರ್ಮಾಣ ಅಥವಾ ದುರಸ್ತಿಗೆ ವಿನಿಯೋಗಿಸಲು ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರದ ಪರ ವಕೀಲರು ವಾದಿಸಿದರು.

ಈ ಬಗ್ಗೆ ನಂತರ ಕೂಲಂಕಷವಾಗಿ ಪರಿಶಿಲನೆ ನಡೆಸುವುದಾಗಿ ಹೇಳಿದ ನ್ಯಾಯಮೂರ್ತಿಗಳು, ಪ್ರವಾಹ, ಭೂಕಂಪದಲ್ಲಿ ಹಾಳಾದ ಮನೆಗಳಿಗೆ ಪರಿಹಾರ ನೀಡಲಾಗುತ್ತದೆ. ಆದರೆ, ಅದೇ ಮಾನದಂಡವನ್ನು ಧಾರ್ಮಿಕ ಕಟ್ಟಡಗಳ ವಿಷಯದಲ್ಲಿ ಯಾಕೆ ಅನುಸರಿಸಲಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಗಲಭೆಯಲ್ಲಿ ಹಾನಿಗೊಳಗಾದ ಧಾರ್ಮಿಕ ಕಟ್ಟಡಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿತು.ಗಲಭೆ ವೇಳೆ ಹಾನಿಗೊಳಗಾಗಿದ್ದ ಸುಮಾರು 500ಕ್ಕೂ ಹೆಚ್ಚು ಧಾರ್ಮಿಕ ಕಟ್ಟಡಗಳ ಪುನರ್ ನಿರ್ಮಾಣ ಅಥವಾ ದುರಸ್ತಿಗೆ ಪರಿಹಾರ ನೀಡುವಂತೆ ಗುಜರಾತ್ ಹೈಕೋರ್ಟ್ ಆದೇಶಿಸಿತ್ತು.

ಪ್ರಾಕೃತಿಕ ವಿಕೋಪ ಅಥವಾ ಕೋಮುಗಲಭೆ ವೇಳೆ ಧ್ವಂಸಗೊಂಡ ಧಾರ್ಮಿಕ ಕಟ್ಟಡಗಳ ದುರಸ್ತಿ ಅಥವಾ ಪುನರ್ ನಿರ್ಮಿಸಲು ಪರಿಹಾರ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶಿಸುವ ಅಧಿಕಾರ ಹೈಕೊರ್ಟ್‌ಗಳಿಗೆ ಇದೆಯೋ ಅಥವಾ ಇಲ್ಲವೋ ಎಂಬುವುದನ್ನು ಪರಿಶೀಲಿಸುವುದಾಗಿ ನ್ಯಾಯಮೂರ್ತಿಗಳು ಇದೇ ವೇಳೆ ಸ್ಪಷ್ಟಪಡಿಸಿದರು.

ಸಂವಿಧಾನದ 226ನೇ ಪರಿಚ್ಛೇದದಡಿ ಈ ರೀತಿ ಆದೇಶ ನೀಡುವ ಹಕ್ಕು ಹೈಕೋರ್ಟ್‌ಗಳಿಗೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಪ್ರಜೆಗಳಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಲಾದ ಹಣವನ್ನು ಧಾರ್ಮಿಕ ಸ್ಥಳಗಳ ದುರಸ್ತಿ ಅಥವಾ ಪುನರ್ ನಿರ್ಮಾಣಕ್ಕೆ ಬಳಸಲು ಸಂವಿಧಾನದ 27ನೇ ಪರಿಚ್ಛೇದದಡಿ ಅವಕಾಶ ನೀಡಲಾಗಿದೆಯೇ ಎಂಬ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.