ADVERTISEMENT

ನಕ್ಸಲೀಯರ ದಾಳಿ: ಎನ್‌ಐಎ ತನಿಖೆ

ಸೇಡು ತೀರಿಸಿಕೊಳ್ಳುತ್ತೇವೆ: ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:28 IST
Last Updated 12 ಮಾರ್ಚ್ 2014, 19:28 IST

ರಾಯಪುರ(ಪಿಟಿಐ/ಐಎಎನ್‌ಎಸ್‌): ‘ಛತ್ತೀಸಗಡದ ಸುಕ್ಮಾ ಜಿಲ್ಲೆಯ ಗೊಂಡಾರಣ್ಯದಲ್ಲಿ 15 ಯೋಧ­ರನ್ನು ಬಲಿತೆಗೆದುಕೊಂಡ ನಕ್ಸಲೀಯರ ವಿರುದ್ಧ ಸೇಡು ತೀರಿಸಿ­ಕೊಳ್ಳದೇ ಬಿಡು­ವುದಿಲ್ಲ’ ಎಂದು ಮತ್ತೊಮ್ಮೆ ಶಪಥ ಮಾಡಿ­ರುವ ಕೇಂದ್ರ ಗೃಹ ಸಚಿವ ಸುಶೀಲ್‌್ ಕುಮಾರ್‌್ ಶಿಂಧೆ, ರಾಷ್ಟ್ರೀಯ ತನಿಖಾ ತಂಡವು (ಎನ್‌ಐಎ) ಈ ದಾಳಿ­ಯ ತನಿಖೆ ಮಾಡಲಿದೆ ಎಂದಿದ್ದಾರೆ.

ದಾಳಿಯಲ್ಲಿ ಹುತಾತ್ಮರಾದ ಯೋಧ­­ರಿಗೆ ಜಗದಾಳ್‌­­­ಪುರದ ಪೊಲೀಸ್‌್ ಪರೇಡ್‌್ ಮೈದಾನದಲ್ಲಿ  ಅಂತಿಮ ನಮನ ಸಲ್ಲಿಸಿದ ಅವರು, ‘ಲೋಕ­ಸಭೆ ಚುನಾ­ವಣೆಗೆ ಅಡ್ಡಿ­ಯುಂಟು­­­ಮಾಡಲು ನಕ್ಸಲರು ಈ ಕೃತ್ಯ ಎಸಗಿದ್ದಾರೆ. ಇವರ ಪತ್ತೆಗೆ ಕೇಂದ್ರ ಹಾಗೂ ರಾಜ್ಯದ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಲಿವೆ. ದಾಳಿ­ಕೋರರು ಎಲ್ಲಿದ್ದಾರೆ ಎನ್ನುವುದು ನಮಗೆ ಗೊತ್ತು’ ಎಂದರು.

‘2013ರ ಮೇ ತಿಂಗಳಿನಲ್ಲಿ ಛತ್ತೀಸ­ಗಡದಲ್ಲಿ ನಕ್ಸಲರು ಕಾಂಗ್ರೆಸ್‌ ಮುಖಂಡ­ರನ್ನು ಹತ್ಯೆ ಮಾಡಿದ ಪ್ರಕರಣ­ವನ್ನು ಎನ್‌ಐಎ ತನಿಖೆಗೆ ಒಳಪಡಿಸಿ­ದ್ದೆವು. ಈಗ ಈ ಪ್ರಕರಣ­ವನ್ನೂ ಎನ್‌ಐಎ ತನಿಖೆ  ಮಾಡಲಿದೆ’ ಎಂದರು.

‘ನಕ್ಸಲ್‌್ ಚಳವಳಿ ದುರ್ಬಲ­ವಾಗುತ್ತಿದೆ. ಅವರಲ್ಲಿ ಅಭದ್ರತೆ ಕಾಡುತ್ತಿದೆ. ಹಾಗಾಗಿ ಇಂಥ ದಾಳಿ ನಡೆಯುತ್ತಿದೆ. ವಿಧಾನಸಭೆ ಚುನಾವಣೆ ವೇಳೆ ಕೂಡ ದಾಳಿ ನಡೆಸಿದ್ದರು.  ಆದರೆ ಅದು ವಿಫಲವಾಗಿತ್ತು’ ಎಂದು ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.

ಗುಪ್ತಚರ ಮಾಹಿತಿ ಇರಲಿಲ್ಲ: ಸುಕ್ಮಾ ದಲ್ಲಿ ನಕ್ಸಲ್‌್ ದಾಳಿ ನಡೆಯುವ ಬಗ್ಗೆ ಗುಪ್ತಚರ ಮಾಹಿತಿ ಬಂದಿತ್ತು ಎನ್ನುವ ವರದಿಗಳನ್ನು ಶಿಂಧೆ ಅಲ್ಲಗಳೆದರು.
‘ಎರಡು–ಮೂರು ಬಾರಿ ಗುಪ್ತಚರ ಮಾಹಿತಿ ಬಂದಿತ್ತು. ಆದರೆ ಅವು ನಿರ್ದಿಷ್ಟ ಮಾಹಿತಿಗಳಾ­ಗಿರಲಿಲ್ಲ’ ಎಂದರು.

ಲೋಕ­ಸಭೆ ಚುನಾವಣೆ ವೇಳೆ ಭದ್ರತಾ ಪಡೆ ನಿಯೋ­ಜನೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಒಡಿಶಾ, ಜಾರ್ಖಂಡ್‌, ಮಹಾ­­ರಾಷ್ಟ್ರ, ಆಂಧ್ರಪ್ರದೇಶ ಮಾತ್ರ ವಲ್ಲ, ಕರ್ನಾಟಕ,ತಮಿಳುನಾಡು ರಾಜ್ಯ­­ಗಳಿ­ಗೂ ಭದ್ರತಾ ಪಡೆ ನಿಯೋಜಿಸ­ಬೇಕಾಗು­ತ್ತದೆ. ಅಗತ್ಯವನ್ನು ಮನ­­ಗಂಡು ಭದ್ರತೆ ಒದಗಿಸಬೇಕಾ­ಗುತ್ತದೆ’ ಎಂದರು.

12,183 ಬಲಿ
ನವದೆಹಲಿ (ಪಿಟಿಐ): ದೇಶದ 9 ರಾಜ್ಯಗಳಲ್ಲಿ  ಕಳೆದ 20 ವರ್ಷಗಳಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 12,183 ಮಂದಿ ನಕ್ಸಲೀಯರ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ‘ಮೃತರದಲ್ಲಿ  9,471 ನಾಗಕರಿ ಕರು, 2,712 ಕೇಂದ್ರ ಹಾಗೂ ರಾಜ್ಯದ ಭದ್ರತಾ ಸಿಬ್ಬಂದಿ ಇದ್ದಾರೆ’ ಎಂದು ಗೃಹ ಸಚಿವಾಲಯ ಮಾಹಿತು ನೀಡಿದೆ.

ನಕ್ಸಲ್‌್ ಅಟ್ಟಹಾಸಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಆಂಧ್ರ­ಪ್ರದೇಶ, ಒಡಿಶಾ, ಉತ್ತರಪ್ರದೇಶ ಹಾಗೂ ಪಶ್ಚಿಮಬಂಗಾಳ ರಾಜ್ಯದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT