ಮುಂಬೈ (ಪಿಟಿಐ): ಇಲ್ಲಿನ ಮಾಹಿಮ್‌ನಲ್ಲಿ ಸೋಮವಾರ ಕಟ್ಟಡ ಕುಸಿದು ಬಿದ್ದು ಸಂಭವಿಸಿದ ಅವಘಡದಲ್ಲಿ ನಟ ಸಂಜಯ್ ದತ್ ಪರ ವಾದ ನಡೆಸುತ್ತಿರುವ ಹೆಸರಾಂತ ವಕೀಲ ರಿಜ್ವಾನ್ ಮರ್ಚಂಟ್ ಅವರ ಕುಟುಂಬದ ಮೂವರು ಸದಸ್ಯರು ಮೃತಪಟ್ಟಿದ್ದಾರೆ.
ಮರ್ಚಂಟ್ ಅವರ 13 ವರ್ಷದ ಮಗ ಫರಾಜ್, ಪತ್ನಿ ಆಸೀಫಾ (50) ಮತ್ತು ಅವರ ತಾಯಿ ತಾಹೀರಾ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ.
`ನಾಲ್ಕು ಅಂತಸ್ತಿನ ಕಟ್ಟಡದ ಅಡಿ ಸಿಕ್ಕಿಕೊಂಡಿರುವುದಾಗಿ ಫರಾಜ್, ತಂದೆಗೆ ಮೊಬೈಲ್‌ನಿಂದ ಕರೆ ಮಾಡಿ ವಿಷಯ ತಿಳಿಸಿದಾಗ ಅವರು ಒಂದು ಕ್ಷಣ ದಂಗಾಗಿದ್ದರು. ಯಾವುದೇ ಅಪಾಯ ಆಗುವುದಿಲ್ಲ ಎಂದು ಮಗನಿಗೆ ಧೈರ್ಯ ತುಂಬಿದ್ದರು. ಆದರೆ, ವಿಧಿಯಾಟ ಬೇರೆಯಾಗಿತ್ತು' ಎಂದು ಕುಟುಂಬ ಮೂಲಗಳು ತಿಳಿಸಿವೆ.
`ಘಟನೆ ಸಂಭವಿಸಿದ ಸೋಮವಾರ ಮತ್ತು ಮಂಗಳವಾರ ಹಲವು ಬಾರಿ ಫರಾಜ್ ತಂದೆಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾನೆ.
ಆದರೆ, ಮಂಗಳವಾರ ಮಧ್ಯಾಹ್ನ ಏಕಾಏಕಿ ಆತನ ಮೊಬೈಲ್ ರಿಂಗಣಿಸಲಿಲ್ಲ. ಕೆಲಹೊತ್ತಿನ ಬಳಿಕ ಕಟ್ಟಡದ ಅವಶೇಷಗಳಿಂದ ಫರಾಜ್ ಮೃತದೇಹವನ್ನು ಹೊರೆತೆಗೆಯಲಾಯಿತು. ಅಚ್ಚರಿಯೆಂದರೆ ಅವರಿಗೆ ಸೇರಿದ ಎರಡು ಗಿಳಿಗಳು ಬದುಕುಳಿದಿವೆ' ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಈ ಕುಟುಂಬದ ಸದಸ್ಯರು ಟರ್ಕಿ ಪ್ರವಾಸದಿಂದ ಇತ್ತೀಚೆಗಷ್ಟೇ ಮರಳಿದ್ದರು. ಟರ್ಕಿಯಲ್ಲೇ ಇದ್ದ ರಿಜ್ವಾನ್ ಮಾತ್ರ ಸೋಮವಾರ ಬೆಳಿಗ್ಗೆ ಬಂದ ಕೂಡಲೇ ಕಚೇರಿಗೆ ಹೋಗಿದ್ದರು. ಹಿರಿ ಮಗ ಫೈಜ್ ಮತ್ತು ಪುತ್ರಿ ಅವರ ಜತೆ ಕಚೇರಿಯಲ್ಲೇ ಇದ್ದಾಗ ತಮ್ಮ ಕಟ್ಟಡ ಕುಸಿದು ಬಿದ್ದ ವಿಷಯ ಅವರಿಗೆ ಗೊತ್ತಾಯಿತು. ಆರಂಭದಲ್ಲಿ ಪತ್ನಿ ಮತ್ತು ತಾಯಿಯ ದೇಹವನ್ನು ಮಾತ್ರ ಹೊರೆತೆಗೆಯಲಾಗಿತ್ತು. ಕಿರಿಯ ಪುತ್ರ ಮೊಬೈಲ್‌ನಲ್ಲಿ ಮಾತನಾಡಿದ್ದರಿಂದ ಆತ ಬದುಕುಳಿದಿರಬಹುದು ಎಂದು ಮರ್ಚಂಟ್ ಭಾವಿಸಿದ್ದರು. ಆದರೆ, ಕೆಲಹೊತ್ತಿನ ಬಳಿಕ ಫರಾಜ್ ಮೃತದೇಹ ಹೊರತೆಗೆದಾಗ ಅವರ ದುಃಖ ಕಟ್ಟೆಯೊಡೆದಿತ್ತು. ಈ ಘಟನೆಯಲ್ಲಿ ಒಟ್ಟು ಹತ್ತು ಜನ ಮೃತಪಟ್ಟಿದ್ದು, ಹಲವು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.