ADVERTISEMENT

ನಾಗಾಲ್ಯಾಂಡ್ ನಿಯೋಗದಿಂದ ಸಚಿವರ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 19:30 IST
Last Updated 19 ಆಗಸ್ಟ್ 2012, 19:30 IST

ಬೆಂಗಳೂರು: ನಾಗಾಲ್ಯಾಂಡ್‌ನ ಇಂಧನ ಸಚಿವ ದೊಶೆಹೆ ವೈ.ಸೇಮಾ ಮತ್ತು ಸಮಾಜ ಕಲ್ಯಾಣ ಇಲಾಖೆಯ ಉಸ್ತುವಾರಿ ಹೊಂದಿರುವ ಸಂಸದೀಯ ಕಾರ್ಯದರ್ಶಿ ಜೋಟಿಸೊ ಸಾಟೊ ನೇತೃತ್ವದ ನಿಯೋಗ ಭಾನುವಾರ ಉಪ ಮುಖ್ಯಮಂತ್ರಿ ಆರ್.ಅಶೋಕ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ನಾಗಾಲ್ಯಾಂಡ್ ಪ್ರಜೆಗಳ ರಕ್ಷಣೆ ಕುರಿತು ಚರ್ಚೆ ನಡೆಸಿತು.

ಈಶಾನ್ಯ ರಾಜ್ಯಗಳಿಂದ ಬಂದಿರುವ ಜನರ ರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಅಶೋಕ ಅವರು ನಿಯೋಗಕ್ಕೆ ಮಾಹಿತಿ ನೀಡಿದರು. ಬೆದರಿಕೆಯ ಸಂದೇಶ ರವಾನಿಸುತ್ತಿದ್ದವರನ್ನು ಪತ್ತೆಹಚ್ಚಿ ತಕ್ಷಣವೇ ಬಂಧಿಸಿರುವುದು ಮತ್ತು ಈಶಾನ್ಯ ರಾಜ್ಯಗಳ ನಾಗರಿಕರಿಗೆ ರಕ್ಷಣೆ ಒದಗಿಸುವುದಕ್ಕಾಗಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿರುವುದಕ್ಕಾಗಿ ನಾಗಾಲ್ಯಾಂಡ್ ನಿಯೋಗ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಿತು.

ಭೇಟಿಯ ಬಳಿಕ ಮಾತನಾಡಿದ ಸೇಮಾ, `ಕರ್ನಾಟಕದಲ್ಲಿ ನೆಲೆಸಿರುವ ನಾಗಾಲ್ಯಾಂಡ್ ಜನರು ಕನ್ನಡ ಭಾಷೆಯನ್ನು ಕಲಿಯಬೇಕು ಮತ್ತು ಇಲ್ಲಿನ ಜನರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅವರ ಜೊತೆ ಬೆರೆಯಬೇಕು. ದಾಳಿಯ ಭೀತಿಯಿಂದ ರಾಜ್ಯದಿಂದ ತೆರಳಿರುವ ಜನರನ್ನು ಇಲ್ಲಿಗೆ ಮರಳುವಂತೆ ಮನವೊಲಿಸಲು ಕರ್ನಾಟಕದಲ್ಲಿರುವ ನಾಗಾಲ್ಯಾಂಡ್ ಜನತೆ ಪ್ರಯತ್ನಿಸಬೇಕು~ ಎಂದರು. ನಾಗಾಲ್ಯಾಂಡ್‌ನ ಗುಪ್ತಚರ ವಿಭಾಗದ ಐಜಿಪಿ ಕಿಕೊನಿ ನಿಯೋಗದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.