ನವದೆಹಲಿ (ಪಿಟಿಐ/ಐಎಎನ್‌ಎಸ್): ಲೋಕಸಭೆ ಚುನಾವಣೆ ವೇಳೆ ಭಾರಿ ಸ್ಫೋಟದ ಸಂಚು ರೂಪಿಸಿದ್ದ ಇಂಡಿಯನ್ ಮುಜಾಹಿದೀನ್ (ಐ.ಎಂ) ಉಗ್ರ ಜಿಯಾ ಉರ್ ರೆಹಮಾನ್ ಅಲಿಯಾಸ್ ವಕಾಸ್ ಹಾಗೂ ಆತನ ಮೂವರು ಸಹಚರರನ್ನು ದೆಹಲಿ ಪೊಲೀಸರು ರಾಜಸ್ತಾನದಲ್ಲಿ ಬಂಧಿಸಿದ್ದಾರೆ.
‘ರೆಹಮಾನ್ ಸಹಚರರ ಮನೆಯಿಂದ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳು, ಸ್ಫೋಟಕ ಸಾಧನ, ಎಲೆಕ್ಟ್ರಾನಿಕ್ ಸರ್ಕಿಟ್/ಟೈಮರ್ ವಶಕ್ಕೆ ಪಡೆಯಲಾಗಿದ್ದು, ಸಂಭವನೀಯ ಬಹು ದೊಡ್ಡ ದಾಳಿ ತಪ್ಪಿಸಲಾಗಿದೆ’ ಎಂದು ದೆಹಲಿ ಪೊಲೀಸ್ ವಿಶೇಷ ಘಟಕದ ಆಯುಕ್ತ ಎಸ್.ಎನ್.ಶ್ರೀವಾಸ್ತವ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
‘ಪಾಕಿಸ್ತಾನಿ ಪ್ರಜೆ ರೆಹಮಾನ್, ಭಾರತದಾದ್ಯಂತ ನಡೆದ ಹಲವಾರು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ. ಪೊಲೀಸರು ಈತನಿಗೆ ಬಲೆ ಬೀಸಿದ್ದರು. ಇದೊಂದು ದೊಡ್ಡ ಬೇಟೆ’ ಎಂದು ಅವರು ನುಡಿದರು.
ಎಲ್ಲಿ ಬಂಧನ: ಆಗ ತಾನೇ ಬಾಂದ್ರಾ ರೈಲಿನಿಂದ ಇಳಿದು ಬರುತ್ತಿದ್ದ ರೆಹಮಾನ್ನನ್ನು ಅಜ್ಮೇರ್ ರೈಲು ನಿಲ್ದಾಣದ ಹೊರಗೆ ಬಂಧಿಸಲಾಯಿತು.
ರೆಹಮಾನ್ ಕೊಟ್ಟ ಮಾಹಿತಿ ಮೇರೆಗೆ ಆತನ ಸಹಚರರಾದ ಮೊಹಮ್ಮದ್ ಮಹ್ರುಫ್ (21), ಮೊಹಮ್ಮದ್ ವಕಾರ್ ಅಜರ್ ಅಲಿಯಾಸ್ ಹನೀಫ್ (21) ಮತ್ತು ಜೋಧಪುರದ ಶಾಕಿಬ್ ಅನ್ಸಾರಿ ಅಲಿಯಾಸ್ ಖಾಲಿದ್ನನ್ನು (25) ಕೂಡ ಪೊಲೀಸರು ಬಂಧಿಸಿದರು. ಇವರಲ್ಲಿ ಮಹ್ರುಫ್ ಹಾಗೂ ಹನೀಫ್ ಜೈಪುರದವರು. ಖಾಲಿದ್ ಜೋಧಪುರ ವಾಸಿ.
ಯುವಕನ ವಿಚಾರಣೆ: ಈ ನಡುವೆ, ಪೊಲೀಸರು ಜಾಮಿಯಾ ನಗರದ ಶಹೀನ್ ಬಾಗ್‌ನಲ್ಲಿ ಯುವಕನೊಬ್ಬನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈತ ರೆಹಮಾನ್ ಸಹಚರರ ಜತೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಬಂಧಿತರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಮೇಲೆ ಕಣ್ಣಿಟ್ಟಿದ್ದರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ಸದ್ಯದ ತನಿಖೆಯಲ್ಲಿ ಆ ರೀತಿ ಅನುಮಾನವೇನೂ ಬಂದಿಲ್ಲ’ ಎಂದು ಶ್ರೀವಾಸ್ತವ್ ಉತ್ತರಿಸಿದರು.
ಈ ಉಗ್ರರು ಯಾವುದೇ ರಾಜಕಾರಣಿ ಅಥವಾ ಚುನಾವಣಾ ಪ್ರಚಾರ ಸಭೆ ಮೇಲೆ ದಾಳಿ ನಡೆಸುವ ಹುನ್ನಾರ ನಡೆಸಿದ್ದರೇ ಎಂಬ ಪ್ರಶ್ನೆಗೆ ‘ ಪ್ರಾಥಮಿಕ ಹಂತದ ತನಿಖೆಯಲ್ಲಿ ಏನೂ ಹೇಳಲಿಕ್ಕೆ ಆಗದು’ ಎಂದರು.
ಬಂಧಿತರ ಮನೆಗಳಿಂದ ವಶಪಡಿಸಿಕೊಂಡ ಸ್ಫೋಟಕ ಸಾಮಗ್ರಿಗಳಿಗೆ ಸಂಬಂಧಿಸಿ ಜೈಪುರ ಮತ್ತು ಜೋಧಪುರದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಸಹಚರರ ಮಾಹಿತಿ: ಮಹ್ರುಫ್ ಹಾಗೂ ವಕಾರ್ ಜೈಪುರದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ. ಅನ್ಸಾರಿ ಕಂಪ್ಯೂಟರ್ ಡಿಟಿಪಿ ಸೆಂಟರ್ ನಡೆಸುತ್ತಿದ್ದಾನೆ.
ರೆಹಮಾನ್ ಹೇಳಿದ್ದೇನು: ‘ಐಎಂ ಸಂಘಟನೆಯ ರಾಜಸ್ತಾನ ಘಟಕದ ಮೂವರು ಉಗ್ರರು ದಾಳಿಗೆ ಸಂಚು ರೂಪಿಸುತ್ತಿದ್ದರು. ಅದನ್ನು ಪರಿಶೀಲಿಸಲು ಹಾಗೂ ಸಹಕಾರ ನೀಡಲು ನಾನು ಅಜ್ಮೇರ್‌ಗೆ ಬಂದಿದ್ದೆ’ ಎಂದು ರೆಹಮಾನ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಸುಧಾರಿತ ಸ್ಫೋಟಕ ಸಾಧನ ಹಾಗೂ ಇತರ ಸ್ಫೋಟಕ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ರೆಹಮಾನ್ನನ್ನು ದೆಹಲಿಗೆ ಕರೆತಂದು ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಕೋರ್ಟ್ ಈತನನ್ನು 10 ದಿನಗಳ ವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ರೆಹಮಾನ್ 2010ರಲ್ಲಿ ಕಠ್ಮಂಡು ಮೂಲಕ ಭಾರತಕ್ಕೆ ಬಂದ. ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಯಾಸೀನ್ ಭಟ್ಕಳನನ್ನು ಕಳೆದ ವರ್ಷ ಬಂಧಿಸಿದ ಬಳಿಕ ಈತ ದೇಶದ ವಿವಿಧ ಭಾಗಗಳಲ್ಲಿ ತಲೆಮರೆಸಿಕೊಂಡಿದ್ದ. ಒಡಿಶಾ, ಪಶ್ಚಿಮಬಂಗಾಳ, ಕೇರಳ ಹಾಗೂ ಮಹಾರಾಷ್ಟ್ರದಲ್ಲೂ ಈತ ಕೆಲ ಕಾಲ ಇದ್ದ. ಅಜ್ಮೇರ್‌ಗೆ ಬರುವುದಕ್ಕೆ ಮೊದಲು ಮುಂಬೈನಲ್ಲಿ ಕೆಲವು ದಿನ ತಂಗಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಮನೆ ಮೇಲೆ ದಾಳಿ ನಡೆಸಿ ಬಂಧನ
‘ದೆಹಲಿ ಪೊಲೀಸ್ ವಿಶೇಷ ಘಟಕ ನೀಡಿದ ಖಚಿತ ಮಾಹಿತಿ ಮೇರೆಗೆ ರಾಜಸ್ತಾನ ಎಟಿಎಸ್ ತಂಡ ಜೋಧಪುರದ ಬರ್ಕತುಲ್ಲಾ ಖಾನ್ ಬಡಾವಣೆಯ ಮನೆಯೊಂದರ ಮೇಲೆ ದಾಳಿ ನಡೆಸಿ ಶಾಕಿಬ್ ಅನ್ಸಾರಿ ಅಲಿಯಾಸ್ ಖಾಲಿದ್ನನ್ನು ಬಂಧಿಸಿತು’ ಎಂದು ಪೊಲೀಸ್ ಆಯುಕ್ತ ಸಚಿನ್ ಮಿತ್ತಲ್ ಹೇಳಿದ್ದಾರೆ. ಖಾಲಿದ್ ಮನೆಯಲ್ಲಿ ಪೊಲೀಸರು ಅಪಾರ ಪ್ರಮಾಣ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
‘6.5 ಕೆ.ಜಿ ಅಮೋನಿಯಂ ನೈಟ್ರೇಟ್, 42 ಕೆ.ಜಿ. ಗನ್ ಪೌಡರ್, 17.65 ಕೆ.ಜಿ ಜಲ್ಲಿ ಪುಡಿ,1.6 ಕೆ.ಜಿ ಕೆಂಪು ರಂಜಕ, 592 ಅಡಿ ಉದ್ದದ ಫ್ಯೂಸ್ ವೈರ್, 3 ಟೈಮರ್ ಸ್ವಿಚ್‌ಗಳು, 8 ಎಲೆಕ್ಟ್ರಾನಿಕ್ ಸ್ವಿಚ್‌ಗಳು, 15 ಡಯೋಡ್‌ಗಳು ಹಾಗೂ ಎಲೆಕ್ಟ್ರಾನಿಕ್ ಸ್ಫೋಟಕ ಸಾಧನ, ಒಂದು ಎಲೆಕ್ಟ್ರಾನಿಕ್ ಸರ್ಕಿಟ್ ಪ್ಲೇಟ್, 2 ಎಲೆಕ್ಟ್ರಾನಿಕ್ ಹೈ ವೊಟೇಜ್ ಬ್ಯಾಟರಿಗಳು, ಒಂದು ಕಚ್ಚಾ ಪೈಪ್ ಬಾಂಬ್, 2 ಲ್ಯಾಪ್‌ಟಾಪ್, 1 ಸಿಪಿಯು, 3 ಮೆಮೊರಿ ಕಾರ್ಡ್, 1 ಕಾರ್ಡ್ ರೀಡರ್, 4 ಪೆನ್ ಡ್ರೈವ್, 2 ಮೊಬೈಲ್ ಫೋನ್ ಹಾಗೂ ಸಿ.ಡಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.
2011ರಲ್ಲಿ ಐಪಿಎಲ್ ಪಂದ್ಯದ ಮೇಲೆ ಕಣ್ಣಿಟ್ಟಿದ್ದ...
ಮುಂಬೈ (ಪಿಟಿಐ): ‘ಇಲ್ಲಿನ ವಾಂಖೆಡೆ ಕ್ರೀಡಾಂಣದಲ್ಲಿ 2011ರಲ್ಲಿ ನಡೆದ ಐಪಿಎಲ್ ಪಂದ್ಯವನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲು ಐಎಂ ರೂಪಿಸಿದ್ದ ಸಂಚಿನಲ್ಲಿ ರೆಹಮಾನ್ ಪ್ರಮುಖ ಪಾತ್ರ ವಹಿಸಿದ್ದ’ ಎಂದು ಎಟಿಎಸ್ ಮೂಲಗಳು ತಿಳಿಸಿವೆ. ಆದರೆ ಕ್ರೀಡಾಂಗಣದಲ್ಲಿ ಬಿಗಿ ಭದ್ರತೆ ಇದ್ದ ಕಾರಣ ಸಂಚು ಫಲಿಸಲಿಲ್ಲ.
2011ರ ಏಪ್ರಿಲ್ 20ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಪುಣೆ ವಾರಿಯರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಧ್ಯೆ ನಡೆದ ಪಂದ್ಯವನ್ನು ಈತ ಟಿಕೆಟ್ ಕೊಟ್ಟು ವೀಕ್ಷಿಸಿದ್ದ. ಎರಡು ದಿನಗಳ ಬಳಿಕ ತನ್ನ ಸಹಚರ ಅಸಾದುಲ್ಲಾ ಅಖ್ತರ್ ಜತೆ ಬಂದು ಕ್ರೀಡಾಂಗಣದ ಸುತ್ತಮುತ್ತ ತಿರುಗಾಡಿದ. ಭದ್ರತೆಯಲ್ಲಿ ಎಲ್ಲಾದರೂ ಲೋಪ ಕಾಣುವುದೇ ಎಂದು ಹುಡುಕಾಟ ನಡೆಸಿದ. ಆ ಸಮಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಪಂದ್ಯ ನಡೆಯುತ್ತಿತ್ತು.
ರೆಹಮಾನ್ ಭಾಗಿಯಾದ ಇತರ ಪ್ರಕರಣಗಳು
ಡಿಸೆಂಬರ್ 7, 2010: ವಾರಾಣಸಿ ಶೀಟ್ಲಾ ಘಾಟ್ ಸ್ಫೋಟ
ಜುಲೈ 12, 2011: ಮುಂಬೈನ ಒಪೆರಾ ಹೌಸ್ ಹಾಗೂ ಜವೇರಿ ಬಜಾರ್ ಸ್ಫೋಟ
ಆಗಸ್ಟ್1, 2012: ಪುಣೆ ಜರ್ಮನಿ ಬೇಕರಿ ಸ್ಫೋಟ
ಫೆಬ್ರುವರಿ 21, 2013: ಹೈದರಾಬಾದ್ ಸರಣಿ ಸ್ಫೋಟ
ಪಾಕ್‌ನಲ್ಲಿ ತರಬೇತಿ
ಪಾಕಿಸ್ತಾನದ ಲಷ್ಕರ್–ಎ–ತೈಯಬಾ (ಎಲ್‌ಇಟಿ) ಶಿಬಿರದಲ್ಲಿ ಸ್ಫೋಟಕ ತಯಾರಿಕೆ ತರಬೇತಿ ಪಡೆದುಕೊಂಡಿದ್ದ ರೆಹಮಾನ್, 2010ರ ಸೆಪ್ಟೆಂಬರ್ 19ರಂದು ದೆಹಲಿಯ ಜಾಮಾ ಮಸೀದಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ.
ಯಾಸೀನ್ ಕೊಟ್ಟ ಸುಳಿವು
ಐಎಂ ಸಹ ಸಂಸ್ಥಾಪಕ ಯಾಸೀನ್ ಭಟ್ಕಳ ಹಾಗೂ ಭಾರತಕ್ಕೆ ಬೇಕಾದ ಪ್ರಮುಖ ಉಗ್ರ ಅಸಾದುಲ್ಲಾ ಅಖ್ತರ್‌್ ಅಲಿಯಾಸ್ ಹಡ್ಡಿ ಯನ್ನು ಪ್ರಶ್ನೆಗೊಳಪಡಿಸಿದಾಗ ರೆಹಮಾನ್ ಮತ್ತವನ ಸಂಗಡಿಗರ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ಸಿಕ್ಕಿತು.
‘ಮೋದಿಗೆ ಹೆಚ್ಚಿನ ಭದ್ರತೆ’
ಮುಂಬೈ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಈಗಾಗಲೇ ಮೇಲ್ದರ್ಜೆ ಗೇರಿಸಲಾಗಿದ್ದು ಅವರಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಸುಶೀಲಕುಮಾರ್ ಶಿಂಧೆ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರಿಗೆ ಭದ್ರತೆ ಒದಗಿಸಲು ಕೋರಿ ರವಿಶಂಕರ ಪ್ರಸಾದ್ ನೇತೃತ್ವದ ನಿಯೋಗ ಶಿಂಧೆ ಅವರಿಗೆ ಮನವಿ ಸಲ್ಲಿಸಿತು. ‘ಬೆದರಿಕೆ ಇರುವ ಬಿಜೆಪಿ, ಬಿಎಸ್‌ಪಿ ಅಥವಾ ಕಾಂಗ್ರೆಸ್‌ನ ಯಾವ ನಾಯಕರೇ ಆಗಿದ್ದರೂ ಅವರಿಗೆಲ್ಲ ನಾವು ಅಗತ್ಯ ಭದ್ರತೆ ಒದಗಿಸಿದ್ದೇವೆ. ಭಯೋತ್ಪಾದಕ ಸಂಘಟನೆಗಳಿಂದ ಬಿಜೆಪಿ ನಾಯಕರಿಗೆ ಬೆದರಿಕೆ ಇರುವ ಸಾಧ್ಯತೆಗಳ ಕುರಿತು ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಶಿಂಧೆ ಈ ಸಂದರ್ಭದಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.