ADVERTISEMENT

ಪಂಚಗವ್ಯಕ್ಕೆ ಔಷಧದ ಗುಣ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಸಂಶೋಧನೆಗೆ ಯೋಜನೆ

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST
ಪಂಚಗವ್ಯಕ್ಕೆ ಔಷಧದ ಗುಣ
ಪಂಚಗವ್ಯಕ್ಕೆ ಔಷಧದ ಗುಣ   

ನವದೆಹಲಿ: ಪಂಚಗವ್ಯದ ಔಷಧ ಗುಣ ಮತ್ತು ಅದರ ಉಪಯುಕ್ತತೆಯ ವೈಜ್ಞಾನಿಕ ದೃಢೀಕರಣಕ್ಕಾಗಿ ಮೂರು ವರ್ಷಗಳ ರಾಷ್ಟ್ರೀಯ ಯೋಜನೆಯೊಂದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಚಾಲನೆ ನೀಡಿದೆ.

ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್‌ ಅವರು 19 ಸದಸ್ಯರ ರಾಷ್ಟ್ರೀಯ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಸಮಿತಿಯು ಪಂಚಗವ್ಯಕ್ಕೆ ಸಂಬಂಧಿಸಿ ದೇಶದಾದ್ಯಂತ ನಡೆಯುವ ಸಂಶೋಧನೆಗಳಿಗೆ ಮಾರ್ಗದರ್ಶನ ನೀಡಲಿದೆ.

ಸದಸ್ಯರಾಗಿ ಹಿರಿಯ ವಿಜ್ಞಾನಿಗಳು: ವೈಜ್ಞಾನಿಕ ಮತ್ತು ಕೈಗಾರಿಕಾ ತರಬೇತಿ ಮಂಡಳಿಯ (ಸಿಎಸ್‌ಐಆರ್‌) ಮಾಜಿ ಮಹಾ ನಿರ್ದೇಶಕ ಆರ್‌.ಎ. ಮಾಷೇಲ್ಕರ್‌, ನಳಂದ ವಿಶ್ವವಿದ್ಯಾಲಯದ ಕುಲಪತಿ ವಿಜಯ ಭಟ್ಕರ್‌ ರಾಷ್ಟ್ರೀಯ ಸಮಿತಿಯ ಸದಸ್ಯರು. ಭಟ್ಕರ್‌ ಅವರು ಸ್ವದೇಶಿ ಸೂಪರ್‌ ಕಂಪ್ಯೂಟರ್‌ ಪರಮ್‌ ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ADVERTISEMENT

ಐಐಟಿ ದೆಹಲಿಯ ನಿರ್ದೇಶಕ ವಿ. ರಾಮಗೋಪಾಲ್‌ ರಾವ್‌ ಮತ್ತು ಮೂವರು ಪ್ರಾಧ್ಯಾಪಕರು ಸಮಿತಿಯಲ್ಲಿದ್ದಾರೆ. ಕೇಂದ್ರ ಸರ್ಕಾರದ ವಿಜ್ಞಾನಕ್ಕೆ ಸಂಬಂಧಿಸಿದ ಇಲಾಖೆಗಳ ಹಲವು ಕಾರ್ಯದರ್ಶಿಗಳು ಕೂಡ ಸದಸ್ಯರಾಗಿರುತ್ತಾರೆ.

ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಈ ಯೋಜನೆಗೆ ಬೆಂಬಲ ನೀಡಲಿದೆ.
‘ಪಂಚಗವ್ಯವನ್ನು ಒಂದು ನೈಸರ್ಗಿಕ ಉತ್ಪನ್ನ ಎಂದು ನಾವು ಪರಿಗಣಿಸುತ್ತೇವೆ. ಇದರ ಕೆಲವು ಅಂಶಗಳ ಬಗ್ಗೆ ಹಿಂದೆ ಸಿಎಸ್‌ಐಆರ್‌ ಸಂಶೋಧನೆ ನಡೆಸಿತ್ತು. ಈಗ ಅದರ ವೈದ್ಯಕೀಯ ಅಂಶಗಳ ಬಗ್ಗೆ ಗಮನ ಹರಿಸಲಾಗುವುದು. ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಯಲ್ಲಿ ಸೆಗಣಿ ಬಳಸುವ ಬಗ್ಗೆಯೂ ಸಂಶೋಧನೆ ನಡೆಯಲಿದೆ. ಮೊದಲಿಗೆ ಪ್ರಸ್ತಾವಗಳ ವೈಜ್ಞಾನಿಕ ಮೌಲ್ಯಮಾಪನ ನಡೆಸಲಾಗುವುದು’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಷುತೋಷ್‌ ಶರ್ಮಾ ಪ್ರಜಾವಾಣಿಗೆ ತಿಳಿಸಿದ್ದಾರೆ.

ಏಪ್ರಿಲ್‌ 25ರಂದು ಸಮಿತಿಯನ್ನು ರಚಿಸಲಾಗಿದೆ. ಯೋಜನೆಯ ಸರ್ವೋಚ್ಚ ಸಮಿತಿಯಾಗಿ ಇದು ಕಾರ್ಯನಿರ್ವಹಿಸಲಿದೆ. ಸಂಶೋಧನಾ ಯೋಜನೆಗಳ ಆಯ್ಕೆ ಮತ್ತು ವೆಚ್ಚದ ಬಗ್ಗೆ ಶಿಫಾರಸು ಮಾಡುವುದು ಸಮಿತಿಯ ಹೊಣೆ. ಈತನಕ ಯಾವುದೇ ಪ್ರಸ್ತಾವ ಬಂದಿಲ್ಲ
ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕೆ. ವಿಜಯರಾಘವನ್‌ ತಿಳಿಸಿದ್ದಾರೆ.

ಹಿಂದೆಯೂ ನಡೆದಿತ್ತು: ಹಿಂದಿನ ಎನ್‌ಡಿಎ ಸರ್ಕಾರದ ಅವಧಿಯಲ್ಲಿಯೂ ಪಂಚಗವ್ಯದ ಔಷಧೀಯ ಗುಣಗಳ ಬಗ್ಗೆ ಸಿಎಸ್‌ಐಆರ್‌ ಸಂಶೋಧನೆ ನಡೆಸಿತ್ತು. ಯಜ್ಞದಿಂದ ಮಳೆ ಬರಿಸುವುದು ಸಾಧ್ಯವೇ ಎಂಬ ವಿಚಾರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಂಶೋಧನೆ ಮಾಡಿಸಿತ್ತು.

ಪಂಚಗವ್ಯ ಎಂದರೇನು?
ಇದು ಹಿಂದೂ ಧಾರ್ಮಿಕ ವಿಧಿಗಳಲ್ಲಿ ಬಳಕೆಯಾಗುತ್ತದೆ. ದೇಶೀ ತಳಿಯ ಹಸುವಿನ ಸೆಗಣಿ, ಮೂತ್ರ, ಹಾಲು, ಮೊಸರು ಮತ್ತು ತುಪ್ಪವನ್ನು ಬಳಸಿ ಪಂಚಗವ್ಯವನ್ನು ತಯಾರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.