ADVERTISEMENT

ಪಂಜಾಬ್‍ನಲ್ಲಿದೆ 'ಮುಸ್ಲಿಂ ಗೋಶಾಲೆ'; ಇಲ್ಲಿದೆ ಬ್ರಹ್ಮ,ವಿಷ್ಣು ಹೆಸರಿನ ಹಸುಗಳು!

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 8:33 IST
Last Updated 19 ಜೂನ್ 2018, 8:33 IST
ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್
ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್   

ಲುಧಿಯಾನ: ಪಂಜಾಬ್‍ನ ಲುಧಿಯಾನ ಜಿಲ್ಲೆಯ ಪಾಯಲ್ ಎಂಬ ಊರಿನಲ್ಲಿ ಗೋಶಾಲೆಯೊಂದಿದೆ. ಪಾರ್ವತಿ, ಬ್ರಹ್ಮ,ವಿಷ್ಣು, ಮಹೇಶ ಮೊದಲಾದ ಹೆಸರಿನ ಹಸುಗಳು ಇಲ್ಲಿವೆ. ಮುಸ್ಲಿಂ ಗೋಶಾಲೆ ಎಂದೇ ಕರೆಯಲ್ಪಡುವ ಈ ಗೋಶಾಲೆಯನ್ನು ಆರಂಭಿಸಿದ್ದು ಸಲ್ಮಾ ಎಂಬ ಮಹಿಳೆ. ಈ ಗೋಶಾಲೆ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ಶುರುವಾಗಿದ್ದು ಹೀಗೆ
2007 ಆಗಸ್ಟ್ ತಿಂಗಳಲ್ಲಿ ಗಾಯಗೊಂಡ ಎತ್ತುವೊಂದನ್ನು ನೋಡಿದ ಸಲ್ಮಾ ಅದನ್ನು ಮನೆಗೆ ಕರೆತಂದಿದ್ದರು. ಅದಕ್ಕೆ ನಂದಿ ಎಂದು ಹೆಸರಿಡಲಾಯಿತು. ಆಮೇಲೆ ಬಿಡಾಡಿ ದನವೊಂದನ್ನು ಸಾಕಿದ ಸಲ್ಮಾ ಅದಕ್ಕೆ ಗೌರಿ ಎಂದು ಹೆಸರಿಟ್ಟರು. ಹೀಗೆ ಗಾಯಗೊಂಡ ಹಸುಗಳನ್ನು ಆರೈಕೆ ಮಾಡಿ, ಬಿಡಾಡಿ ಹಸುಗಳಿಗೆ ಪ್ರೀತಿ ನೀಡಿದ ಸಲ್ಮಾ ಆನಂತರ ಗೋಶಾಲೆಯೊಂದನ್ನು ನಿರ್ಮಿಸಿದರು. ಇದೀಗ ಇಲ್ಲಿ 33 ಹಸುಗಳಿವೆ.

ಸಲ್ಮಾ ಅವಿವಾಹಿತೆ. ಆಕೆಯ ಅಪ್ಪ ನೇಕ್ ಮೊಹಮ್ಮದ್ ಮತ್ತು ಚಿಕ್ಕಮ್ಮ ತೆಜೊ ಅವರು ಸಲ್ಮಾಳ ಕಾರ್ಯಕ್ಕೆ ಸಹಾಯವಾಗಿ ನಿಂತಿದ್ದಾರೆ. ಅದು ಯಾಕೆ ನಿಮ್ಮ ಗೋಶಾಲೆಯನ್ನು ಮುಸ್ಲಿಂ ಗೋಶಾಲೆ ಎಂದು ಕರೆಯುತ್ತಾರೆ? ಎಂದು ಕೇಳಿದರೆ, ಮುಸ್ಲಿಮರಿಗೆ ಪ್ರಾಣಿಗಳನ್ನು ಕೊಲ್ಲುವುದಷ್ಟೇ ಗೊತ್ತು ಎಂದು ಜನರು ಹೇಳುತ್ತಾರೆ. ಆದರೆ ನಮಗೂ ಹೃದಯವಿದೆ. ನಾವು ಕೂಡಾ ಪ್ರಾಣಿಗಳನ್ನು ಪ್ರೀತಿಸುತ್ತೇವೆ ಎಂಬುದು ಸಲ್ಮಾ ನೀಡಿದ ಉತ್ತರ.

ADVERTISEMENT

33ರ ಹರೆಯದ ಸಲ್ಮಾ ಅವರಿಗೆ ವಿವಾಹ ಸಂಬಂಧಗಳು ಬರುತ್ತಿದ್ದರೂ, ಮುಸ್ಲಿಂ ಮಹಿಳೆಗೆ ಯಾಕೆ ಗೋಶಾಲೆ ಉಸಾಬರಿ ಎಂದು ಕೇಳಿ ಹುಡುಗನ ಕಡೆಯವರು ಸಂಬಂಧ ತಿರಸ್ಕರಿಸುತ್ತಿದ್ದಾರಂತೆ. ಆದಾಗ್ಯೂ, ನನ್ನೊಂದಿಗೆ ಗೋಶಾಲೆಯನ್ನು ನೋಡಿಕೊಳ್ಳುವ ಮನಸ್ಸು ಇರುವ ಹುಡುಗನನ್ನು ಮಾತ್ರ ನಾನು ಮದುವೆಯಾಗುತ್ತೇನೆ ಎಂದು ಸಲ್ಮಾ ಹೇಳುತ್ತಾರೆ.

ಧರ್ಮಗಳ ಬಗ್ಗೆ ನಾನು ಏನೂ ಹೇಳಲಾರೆ. ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ನಾನು ಗೋವುಗಳಲ್ಲಿ ದೇವರನ್ನು ಕಾಣುವುದಿಲ್ಲ. ಆದರೆ ಸಹಾಯದ ಅಗತ್ಯವಿರುವ ಪ್ರಾಣಿ ಅದು ಎಂದೇ ನಾನು ಪರಿಗಣಿಸುತ್ತೇನೆ. ನಾನು ಖುರಾನ್ ಓದುತ್ತೇನೆ, ಅಲ್ಲಾಹುವಿನ ಮೇಲೆ ನಂಬಿಕೆಯೂ ಇದೆ. ಎಲ್ಲ ಪ್ರಾಣಿಗಳಿಗೂ ಸಹಾಯ ಮಾಡುವಂತ ನನ್ನ ಧರ್ಮ ನನಗೆ ಕಲಿಸುತ್ತದೆ. ಅಲ್ಲಾಹುವಿನ ಸೃಷ್ಟಿಯಾದ ಪ್ರಾಣಿಗಳು ನಿಸ್ಸಹಾಯರಾಗಿದ್ದರೆ ಅಲ್ಲಿ ನಾನು ಸಹಾಯಕ್ಕೆ ನಿಲ್ಲುತ್ತೇನೆ ಎಂಬುದು ಸಲ್ಮಾಳ ನಿಲುವು.

ಅಂದಹಾಗೆ ಹಸುಗಳ ಆರೈಕೆಯಲ್ಲಿ ತೊಡಗಿರುವ ಈ ಮುಸ್ಲಿಂ ಕುಟುಂಬ ಸಾಮಾಜಿಕ ಬಹಿಷ್ಕಾರವನ್ನೂ ಎದುರಿಸಬೇಕಾಗಿ ಬಂದಿದೆ. ಆ ಪ್ರದೇಶದಲ್ಲಿರುವ ಮುಸ್ಲಿಂ ಕುಟುಂಬಗಳು ಸಲ್ಮಾ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ. ಆದರೆ ಸಲ್ಮಾ ಕುಟುಂಬ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ,
ಹಸುಗಳ ಆರೈಕೆ ಮಾಡುವುದರಿಂದ ನಾನು ಮುಸ್ಲಿಮೇತರಳಾಗುವುದಿಲ್ಲ. ನಾನು ಸಸ್ಯಾಹಾರಿ. ನಮ್ಮ ಸುತ್ತುಮುತ್ತಲಿನ ಮುಸ್ಲಿಂ ಕುಟುಂಬದವರು ಅಪರೂಪಕ್ಕೊಮ್ಮೆ ನಮ್ಮಲ್ಲಿ ಮಾತನಾಡಿದರೂ, ಗೋಶಾಲೆಯನ್ನು ಮುಚ್ಚುವಂತೆ ಸಲಹೆ ನೀಡುತ್ತಿರುತ್ತಾರೆ. ನಮ್ಮ ಮನೆಯ ಪಕ್ಕದಲ್ಲಿರುವ ಹಿಂದೂ ಮತ್ತು ಸಿಖ್ ಕುಟುಂಬದವರೂ ಗೋಶಾಲೆಯಿಂದ ಸೆಗಣಿ ವಾಸನೆ ಬರುತ್ತಿದೆ ಎಂದು ದೂರುವುದೂ ಉಂಟು.

ಹಸುವನ್ನು ಹೊಡೆದು ಕೊಂದರೂ ಅವರಿಗೆ ಏನೂ ಅನಿಸುವುದಿಲ್ಲ ಎಂದು ನನ್ನ ಅರಿವಿಗೆ ಬಂದನಂತರ ನಾನು ನನ್ನ ಹಸುಗಳಿಗೆ ಹಿಂದೂ ದೇವರ ಹೆಸರಿಡುವುದನ್ನು ನಿಲ್ಲಿಸಿದೆ. ಈ ಹಿಂದೆ ನಾನು ಪಾರ್ವತಿ, ಜಗದಂಬಾ, ದುರ್ಗಾ, ಮೀರ, ಸರಸ್ವತಿ, ರಾಧಾ, ಲಕ್ಷ್ಮಿ ಮತ್ತು ತುಳಸಿ ಎಂಬ ಹೆಸರುಗಳನ್ನಿಟ್ಟಿದ್ದೆ. 2012ರ ನಂತರ ನಾನು ಆರೈಕೆ ಮಾಡಿದ ಹಸುಗಳಿಗೆ ಇಝಾಜಾ, ಆಶು, ಗುಲ್ಬದನ್, ಕುಂಕುಮ್, ಹನೀ ಮತ್ತು ಬಾದ್‍ಷಾ ಎಂದು ಹೆಸರಿಟ್ಟಿದ್ದೇನೆ.

ಕಳೆದ ವರ್ಷ 5 ಹಸುಗಳು ಸತ್ತಾಗ ನಾನದನ್ನು ಚರ್ಮ ಸುಲಿಯಲು ಕೊಡದೆ ಹೂತು ಹಾಕಿದ್ದಕ್ಕಾಗಿ ನನ್ನ ವಿರುದ್ಧ ಕೇಸು ದಾಖಲಿಸಲಾಗಿತ್ತು. ಮೊದಲಿಗೆ ಸತ್ತ ಹಸುಗಳನ್ನು ಹೂತು ಹಾಕುವುದಕ್ಕೆ ಜಾಗ ನೀಡಲು ನಿರಾಕರಿಸಿದರು.ಸತ್ತ ಹಸುಗಳ ಚರ್ಮ ಸುಲಿಯುವುದು ನನಗೆ ಇಷ್ಟ ಇಲ್ಲ, ಆನಂತರ ನಾವು ನಮ್ಮ ಜಾಗದಲ್ಲೇ ಹೂತು ಹಾಕಿದೆವು ಎಂದು ಸಲ್ಮಾ ತಮ್ಮ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಗೋರಕ್ಷಕರು ಗೋಹತ್ಯೆ ಮಾಡುವವರ ಮೇಲೆ, ಬೀಫ್ ತಿನ್ನುವವರ ಮೇಲೆ ದಾಳಿ ಮಾಡುವ ವಿಷಯದ ಬಗ್ಗೆ ಮಾತಿಗೆಳೆದಾಗ ಸಲ್ಮಾಅವರು, ದೇಶದ ಜ್ವಲಂತ ಸಮಸ್ಯೆಗಳಾದ ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ರಾಜಕೀಯ ಪಕ್ಷಗಳು ಹಸು ಮತ್ತು ಧರ್ಮವನ್ನು ಬಳಸುತ್ತವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.