ADVERTISEMENT

ಪರಮೇಶ್ವರ್ ಅಧ್ಯಕ್ಷ ಸ್ಥಾನ ಭದ್ರ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 18:30 IST
Last Updated 22 ಆಗಸ್ಟ್ 2012, 18:30 IST

ನವದೆಹಲಿ: ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಡಾ. ಜಿ. ಪರಮೇಶ್ವರ್ ಅವರನ್ನು ಕದಲಿಸದಿರಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ. ಆ ಮೂಲಕ ಪ್ರಬಲ ವೀರಶೈವ ಸಮಾಜದ ನಾಯಕರೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆಯಬಹುದೆಂಬ ನಿರೀಕ್ಷೆಗಳಿಗೆ ವಿರಾಮ ಹಾಕಿದೆ. ವಿದೇಶಾಂಗ ಸಚಿವ ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣ ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಇಲ್ಲಿಯ ಎಐಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರ ಜತೆ ಮೂರೂವರೆ ಗಂಟೆ ಸಮಾಲೋಚನೆ ನಡೆಸಿದ ಹಿರಿಯ ನಾಯಕ ಮಧುಸೂಧನ ಮಿಸ್ತ್ರಿ, ಎಲ್ಲ ರಾಜಕೀಯ ಗೊಂದಲ ಮತ್ತು ನಿರೀಕ್ಷೆಗಳಿಗೆ ತೆರೆ ಎಳೆದಿದ್ದಾರೆ. ವಿಧಾನಸಭಾ ಚುನಾವಣೆಯನ್ನು ಪರಮೇಶ್ವರ್ ನಾಯಕತ್ವದಲ್ಲೇ ಎದುರಿಸಲಾಗುವುದು. ಈ ಬಗ್ಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಶೀಘ್ರವೇ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ವೀರಶೈವ ನಾಯಕರೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿರುವ ಆ ಸಮಾಜದ ಮುಖಂಡರಿಗೆ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆ.
 
ಪರಮೇಶ್ವರ್ ಹಾಗೂ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಪಕ್ಷದ ಗೆಲುವಿಗೆ ಒಗ್ಗೂಡಿ ಶ್ರಮಿಸಲು ಸೂಚನೆ ನೀಡಲಾಗಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರು ಆಕಾಂಕ್ಷಿಯಲ್ಲ ಎಂದು ಮಿಸ್ತ್ರಿ ಹೇಳಿದ್ದಾರೆ. ಸೆಪ್ಟೆಂಬರ್ 2ರಿಂದ ಎಲ್ಲ ಕಂದಾಯ ವಿಭಾಗಗಳಲ್ಲಿ ಪ್ರವಾಸ ಮಾಡಲು ರಾಜ್ಯ ನಾಯಕರಿಗೆ ಹಸಿರು ನಿಶಾನೆ ತೋರಲಾಗಿದೆ. ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಲಾಗಿದೆ.

ರಾತ್ರಿ ಎಂಟು ಗಂಟೆಗೆ ಆರಂಭವಾದ ಸಭೆ 11.30ಕ್ಕೆ ಮುಗಿಯಿತು. ಪರಮೇಶ್ವರ್, ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್, ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ಕಾಂಗ್ರೆಸ್ ನಾಯಕರಾದ ಆಸ್ಕರ್ ಫರ್ನಾಂಡಿಸ್, ಸಂಸದರಾದ ವಿಶ್ವನಾಥ್, ಧ್ರುವನಾರಾಯಣ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ತಮ್ಮ ಮಾಮೂಲು ಮೊನಚು ಶೈಲಿಯಲ್ಲೇ ಮಾತನಾಡಿದ ವಿಶ್ವನಾಥ್, `ರಾಜ್ಯ ರಾಜಕಾರಣಕ್ಕೆ ಕೃಷ್ಣ ಮರಳಲಿದ್ದಾರೆ ಎಂಬ ಮಾತುಗಳಿವೆ~ ಎಂದು ಕೇಳಿದರು. `ಕೃಷ್ಣ ಮತ್ತು ಡಿ.ಕೆ. ಶಿವಕುಮಾರ್ ಜೆಡಿಎಸ್ ಬಗೆಗೆ ಮೃದು ಧೋರಣೆ ತಳೆದಿದ್ದಾರೆ. ಇದರಿಂದಾಗಿ ಜೆಡಿಎಸ್ ಎಂಟು ಜಿಲ್ಲೆಗಳಲ್ಲಿ ಪ್ರಬಲವಾಗಿದೆ. ಈ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಜಾತ್ಯತೀತ ದಳವೇ ಎದುರಾಳಿ~ ಎಂದು ವಿಶ್ಲೇಷಿಸಿದರು. `ಚುನಾವಣೆಯಲ್ಲಿ ಆ ಪಕ್ಷದ ಜತೆ ಹೊಂದಾಣಿಕೆ ಏರ್ಪಡುವುದೇ?~ ಎಂದು ಸ್ಪಷ್ಟನೆ ಬಯಸಿದರು. ಈ ಎಲ್ಲ ಪ್ರಶ್ನೆಗಳಿಗೆ ಮಿಸ್ತ್ರಿ ನಕಾರಾತ್ಮಕ ಉತ್ತರಗಳನ್ನು ಕೊಟ್ಟರು.

ಸಭೆಯಲ್ಲಿ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಕುರಿತು ಚರ್ಚಿಸಲಾಯಿತು. ಚುನಾವಣೆ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ತೀವ್ರ ಬರಗಾಲಕ್ಕೆ ಸಿಕ್ಕಿರುವ ರಾಜ್ಯಕ್ಕೆ ಹೆಚ್ಚು ನೆರವು ಕೊಡಿಸುವ ಪ್ರಯತ್ನ ಮಾಡಬೇಕೆಂಬ ಸಲಹೆ ನೀಡಲಾಯಿತು. ಗುರುವಾರ ಸೋನಿಯಾ ಗಾಂಧಿ ರಾಜ್ಯದ ಮುಖಂಡರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.