ADVERTISEMENT

ಪರಾರಿಯಾದ ಖಲಿಸ್ತಾನ್‌ ಉಗ್ರ ಮಿಂಟೂ ಕೆಲವೇ ತಾಸುಗಳಲ್ಲಿ ಸೆರೆ

ಪಿಟಿಐ
Published 28 ನವೆಂಬರ್ 2016, 19:30 IST
Last Updated 28 ನವೆಂಬರ್ 2016, 19:30 IST
ಪರಾರಿಯಾದ ಖಲಿಸ್ತಾನ್‌ ಉಗ್ರ ಮಿಂಟೂ ಕೆಲವೇ ತಾಸುಗಳಲ್ಲಿ ಸೆರೆ
ಪರಾರಿಯಾದ ಖಲಿಸ್ತಾನ್‌ ಉಗ್ರ ಮಿಂಟೂ ಕೆಲವೇ ತಾಸುಗಳಲ್ಲಿ ಸೆರೆ   

ನವದೆಹಲಿ :  ಪಂಜಾಬ್‌ನ ನಾಭಾ ಜೈಲಿನಿಂದ ಭಾನುವಾರ ಬೆಳಗ್ಗೆ ಪರಾರಿ ಆಗಿದ್ದ ಖಲಿಸ್ತಾನ ಲಿಬರೇಷನ್‌ ಫ್ರಂಟ್‌ನ (ಕೆಎಲ್‌ಎಫ್) ಮುಖ್ಯಸ್ಥ ಹರಮಿಂದರ್ ಸಿಂಗ್ ಮಿಂಟೂನನ್ನು ಪರಾರಿಯಾದ ಕೆಲವೇ ತಾಸುಗಳಲ್ಲಿ ಬಂಧಿಸಲಾಗಿದೆ. ಇಲ್ಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ಈತನನ್ನು ಬಂಧಿಸಲಾಗಿದೆ.

ಈತ ಮಲೇಷ್ಯಾ ಅಥವಾ ಜರ್ಮನಿಗೆ ತೆರಳಲು ಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಕಾರಾಗೃಹಕ್ಕೆ ದಾಳಿ ನಡೆಸಿದ ಶಸ್ತ್ರಸಜ್ಜಿತ 12 ಜನ ದುಷ್ಕರ್ಮಿಗಳು ಇನ್ನೂ ಪತ್ತೆಯಾಗದ ಕಾರಣ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಕಟ್ಟೆಚ್ಚರ ಮುಂದುವರಿದಿದೆ. ಪರಾರಿಯಾಗುವ ವೇಳೆ ಕೈದಿಗಳು ಬಳಸಿದ್ದ ಎರಡು ಕಾರುಗಳು ಹರಿಯಾಣದಲ್ಲಿ ಪತ್ತೆಯಾಗಿವೆ.
ಜೈಲಿನಿಂದ ಪರಾರಿ ಆಗಿರುವ ಮಿಂಟೂ ಮತ್ತು ಇತರ ಕೈದಿಗಳು ದೆಹಲಿಯತ್ತ ತೆರಳಿರುವ ಅನುಮಾನ ಪಂಜಾಬ್ ಪೊಲೀಸರಿಗೆ ಇತ್ತು. ಅವರು ಈ ಬಗ್ಗೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದ್ದರು.

ADVERTISEMENT

ಪಂಜಾಬ್ ಪೊಲೀಸರ ಸೂಚನೆಯಂತೆ ತೀವ್ರ ಸಪಾಸಣೆ ನಡೆಸಿದ ದೆಹಲಿ ಪೊಲೀಸರು ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ಮಿಂಟೂನನ್ನು ಬಂಧಿಸಿದ್ದಾರೆ ಎಂದು ವಿಶೇಷ ಪೊಲೀಸ್ ಕಮಿಷನರ್ ಅರವಿಂದ್ ದೀಪ್ ತಿಳಿಸಿದ್ದಾರೆ. ಪಂಜಾಬ್ ಪೊಲೀಸ್ ತಂಡವು ಬಂಧಿತರನ್ನು ಪಂಜಾಬ್‌ಗೆ ಕರೆದೊಯ್ಯಲಿದೆ.

ಕುಖ್ಯಾತ ಪಾತಕಿ ಗುರುಪ್ರೀತ್ ಸೆಖೊನ್ ಜೈಲಿನಿಂದ ಪರಾರಿ ಆಗುವ ಯೋಜನೆ ರೂಪಿಸಿದ್ದ. ಈ ಯೋಜನೆಯನ್ನು ಕಾರ್ಯಗತಗೊಳಿಸಿದ್ದ  ಪರಮಿಂದರ್ ಸಿಂಗ್‌ನನ್ನು ಉತ್ತರ ಪ್ರದೇಶ ಪೊಲೀಸರು ಶಾಮ್ಲಿ ಜಿಲ್ಲೆಯ ಕೈರಾನದಲ್ಲಿ ಭಾನುವಾರ ಸಂಜೆಯೇ ಬಂಧಿಸಿದ್ದಾರೆ.

ಪೊಲೀಸ್ ಸಮವಸ್ತ್ರದಲ್ಲಿ ಇದ್ದ 12 ಜನ ದುಷ್ಕರ್ಮಿಗಳು ಪಟಿಯಾಲಾದ ನಾಭಾ ಜೈಲಿನ ಕಾವಲುಗಾರನಿಗೆ ಬಾಗಿಲು ತೆಗೆಯಲು ಆದೇಶಿಸಿದ ನಂತರ ಮಿಂಟೂ ಮತ್ತಿತರರು ಜೈಲಿನಿಂದ ಹೊರಗೆ ಬಂದು ಸಿಬ್ಬಂದಿಯನ್ನು ಒಳಗೆ ಕೂಡಿಹಾಕಿ, ಮನಬಂದಂತೆ ಗುಂಡು ಹಾರಿಸಿ ಪರಾರಿ ಆಗಿದ್ದರು.

ಭಯೋತ್ಪಾದನೆಗೆ ಸಂಬಂಧಿಸಿದ 10 ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಿಂಟೂ, ಪಾಕಿಸ್ತಾನದ ಭಯೋತ್ಪಾದಕರು ಮತ್ತು ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ಜನರನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪನ್ವೇಲ್‌ಗೆ ಹೋಗಲು ಮಿಂಟೂ ಟಿಕೆಟ್ ಖರೀದಿಸಿದ್ದ. ಅಲ್ಲಿಂದ ಮುಂಬೈಗೆ, ನಂತರ ಗೋವಾಕ್ಕೆ ಹೋಗುವ ಯೋಚನೆ ಅವನದಾಗಿತ್ತು. ಗೋವಾದಲ್ಲಿ ಈತನಿಗೆ ಒಳ್ಳೆಯ ಸಂಪರ್ಕ ಇದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಥಾಯ್ಲೆಂಡ್ ಸರ್ಕಾರ 2014ರಲ್ಲಿ ಮಿಂಟೂನನ್ನು ಹಸ್ತಾಂತರಿಸಿದ ನಂತರ ಪಂಜಾಬ್ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಮಿಂಟೂನ ಜತೆ ಆತನ ಆಪ್ತ ಗುರುಪ್ರೀತ್ ಸಿಂಗ್‌ನನ್ನು ಸಹ ಬಂಧಿಸಲಾಗಿತ್ತು. ಮಿಂಟೂ ಜತೆ ಪರಾರಿ ಆಗಿದ್ದ ಇತರರೆಂದರೆ ಕಾಶ್ಮೀರ್ ಸಿಂಗ್, ವಿಕಿ ಗೌಂಡರ್, ಅಮನ್‌ದೀಪ್ ಧೊಟಿಯಾನ್ ಮತ್ತು ನಿಟಾ ದೆಯೊಲ್.

ಮಿಂಟೂನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಈತನನ್ನು ಏಳು ದಿನಗಳ ಪೊಲೀಸ್ ವಶಕ್ಕೆ ನೀಡಿದೆ. ಜೈಲಿನಿಂದ ಪರಾರಿಯಾಗುವ ಯೋಜನೆ ಆರು ತಿಂಗಳನಿಂದ ನಡೆದಿತ್ತು ಎಂದು ಮಿಂಟೂ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.

ಆರೋಪಪಟ್ಟಿ ಸಲ್ಲಿಸಲು ಅನುಮತಿ
ನವದೆಹಲಿ:
ಪಠಾಣ್‌ಕೋಟ್‌ ವಾಯುನೆಲೆ ಮೇಲೆ ಜ.2ರಂದು ನಡೆದ ದಾಳಿಗೆ ಸಂಬಂಧಿಸಿದಂತೆ ಜೈಷ್–ಎ–ಮೊಹಮ್ಮದ್‌ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಹಾಗೂ ಮೂವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಕೇಂದ್ರ ಗೃಹ ಸಚಿವಾಲಯವು ಅನುಮತಿ ನೀಡಿದೆ.

ಅಜರ್‌ ಮತ್ತು ಆತನ ಸಹೋದರ ರೌಫ್‌  ಆಸ್ಗರ್‌, ನಾಲ್ವರು ಉಗ್ರರನ್ನು ನಿಯಂತ್ರಿಸುತ್ತಿದ್ದ ಖಾಸೀಫ್‌,  ಶಾಹೀದ್‌ ಲತೀಫ್‌ ವಿರುದ್ಧ ಅಕ್ರಮ ಚಟುವಟಿಕೆ ನಿರ್ಬಂಧ ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ಸಿಕ್ಕಿದ್ದು, ಆದಷ್ಟು ಶೀಘ್ರ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.