ADVERTISEMENT

ಪಾನ್ ಮಸಾಲ ಪ್ಯಾಕಿಂಗ್: ಸುಪ್ರೀಂ ಕೋರ್ಟ್‌ನಲ್ಲಿ ವಾದ

​ಪ್ರಜಾವಾಣಿ ವಾರ್ತೆ
Published 20 ಜುಲೈ 2011, 19:30 IST
Last Updated 20 ಜುಲೈ 2011, 19:30 IST

ನವದೆಹಲಿ: ಪಾನ್ ಮಸಾಲ ಪ್ಯಾಕಿಂಗ್‌ಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಹೊರಡಿಸಿರುವ ಅಧಿಸೂಚನೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿರುವ ಗುಟ್ಕಾ~ ಉತ್ಪಾದಕರು, ಇದು ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಪ್ರತಿಪಾದಿಸಿದ್ದಾರೆ.

ಕಳೆದ ಫೆ. 4ರಂದು ಸರ್ಕಾರ, ಜಗಿಯುವ ತಂಬಾಕು ಉತ್ಪನ್ನಗಳ ಪ್ಯಾಕಿಂಗ್‌ಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಲು `ಪ್ಲಾಸ್ಟಿಕ್ ತ್ಯಾಜ್ಯ ನಿಯಮ 2011~ ಕುರಿತು ಅಧಿಸೂಚನೆ ಹೊರಡಿಸಿತ್ತು. ಸುಪ್ರೀಂಕೋರ್ಟ್ ಫೆ. 2ರಂದು ಪ್ಲಾಸ್ಟಿಕ್ ನಿಷೇಧ ಕುರಿತು ಅಧಿಸೂಚನೆ ಹೊರಡಿಸದ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಎರಡು ದಿನ ಗಡುವು ನೀಡಿತ್ತು.

 ನ್ಯಾಯಾಲಯ ಡಿ. 7ರಂದು, ಜಗಿಯುವ ತಂಬಾಕು ಉತ್ಪನ್ನಗಳಿಗೆ ಮಾರ್ಚ್ 1ರಿಂದ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು.

`ಪ್ಲಾಸ್ಟಿಕ್ ಬಳಕೆ ಹಾನಿಕಾರಕವಲ್ಲ. ಇದನ್ನು ವೈಜ್ಞಾನಿಕವಾಗಿ ನಾವು ಸಾಬೀತು ಮಾಡುತ್ತೇವೆ~ ಎಂದು ಗುಟ್ಕಾ ತಯಾರಕರ ಪರ ಹಾಜರಾದ ಹಿರಿಯ ವಕೀಲ ರಾಂ ಜೇಠ್ಮಾಲನಿ, ನ್ಯಾ. ಜಿ.ಎಸ್.ಸಿಂಘಿ ್ವ ಹಾಗೂ ನ್ಯಾ. ಎಚ್.ಎಲ್ ದತ್ತು ಅವರನ್ನು ಒಳಗೊಂಡ ಪೀಠಕ್ಕೆ ವಿವರಿಸಿದರು.

ಗುಟ್ಕಾ ಮತ್ತಿತರ ತಂಬಾಕು ಉತ್ಪನ್ನಗಳ ಪ್ಯಾಕಿಂಗ್‌ಗೆ ತಂಬಾಕು ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ತಜ್ಞರ ವರದಿಯ ಪ್ರತಿಯನ್ನು ಒದಗಿಸುವಂತೆ ಅರ್ಜಿದಾರರ ಪರವಾಗಿ ಹಾಜರಿದ್ದ ಕೆಲವು ವಕೀಲರು ಮನವಿ ಮಾಡಿದರು.
ಮನವಿ ಪುರಸ್ಕರಿಸಿದ ನ್ಯಾಯಾಲಯ ಏಳು ದಿನಗಳ ಒಳಗಾಗಿ ವರದಿ ಪ್ರತಿ ಒದಗಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿತು. ಕೆಲವು ಗುಟ್ಕಾ ತಯಾರಕರು ಮರು ಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಬಳಕೆಗೆ ನ್ಯಾಯಾಲಯದ ಅನುಮತಿ ಕೇಳಿದರು.

ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ತಿದ್ದುಪಡಿಗೆ ಕೆಲವು ಅರ್ಜಿದಾರರಿಗೆ ನ್ಯಾಯಾಲಯ ಒಪ್ಪಿಗೆ ನೀಡಿತು. ಕೆಲವು ಅರ್ಜಿದಾರರ ಪರ ಹಾಜರಾದ ವಕೀಲರು ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್ 25ಕ್ಕೆ ಮುಂದೂಡಿತು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.