ADVERTISEMENT

ಪೈಪೋಟಿಯಲ್ಲಿ ಬಿಜೆಪಿ ಅಧ್ಯಕ್ಷ ವಿಪ್ಲವ್‌ ಕುಮಾರ್‌ ದೇವ್‌

ತ್ರಿಪುರಾ ಮುಖ್ಯಮಂತ್ರಿ ಹುದ್ದೆ ಮೇಲೆ ಜಿಮ್‌ ತರಬೇತುದಾರನ ಕಣ್ಣು!

ಪಿಟಿಐ
Published 3 ಮಾರ್ಚ್ 2018, 19:30 IST
Last Updated 3 ಮಾರ್ಚ್ 2018, 19:30 IST
ಚಿತ್ರ: ಪ್ರಕಾಶ್‌ ಶೆಟ್ಟಿ
ಚಿತ್ರ: ಪ್ರಕಾಶ್‌ ಶೆಟ್ಟಿ   

ಅಗರ್ತಲಾ: ಯುವ ಜಿಮ್‌ ತರಬೇತುದಾರರೊಬ್ಬರು ತ್ರಿಪುರಾ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ! ಬಿಜೆಪಿ ಸಂಸದೀಯ ಮಂಡಳಿ ಒಪ್ಪಿಗೆ ನೀಡಿದರೆ ಮುಖ್ಯಮಂತ್ರಿಯಾಗಲು ಸಿದ್ಧ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಪ್ಲವ್‌ ಕುಮಾರ್‌ ದೇವ್‌ ಇಂಗಿತ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಸೇರುವ ಮೊದಲು ಒಂದು ಕಾಲಕ್ಕೆ ದೆಹಲಿಯಲ್ಲಿ ಜಿಮ್‌ ತರಬೇತುದಾರರಾಗಿದ್ದ ದೇವ್‌ ಅವರು ಸದ್ಯ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ತಕ್ಷಣ ಅವರ ಹೇಳಿಕೆ ಹೊರಬಿದ್ದಿದೆ.

‘ಬಿಜೆಪಿ ಸಂಸದೀಯ ಮಂಡಳಿ ಜವಾಬ್ದಾರಿ ವಹಿಸಿದರೆ ಅದನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧ. ಜವಾಬ್ದಾರಿಯಿಂದ ಓಡಿ ಹೋಗುವ ಜಾಯಮಾನ ನನ್ನದಲ್ಲ’ ಎಂದ್ದಾರೆ.

ADVERTISEMENT

ಎರಡು ದಶಕಗಳಿಂದ ಅಧಿಕಾರದಲ್ಲಿದ್ದ ಎಡಪಕ್ಷವನ್ನು ಬದಲಿಸೋಣ ‘ಚಲೋ ಪಲ್ಟೆ’ ಎಂದು ಬಿಜೆಪಿ ನೀಡಿದ ಕರೆಗೆ ತ್ರಿಪುರಾ ಜನರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸಭೆಯು ತ್ರಿಪುರಾ ಮುಖ್ಯಮಂತ್ರಿ ಅಭ್ಯರ್ಥಿ ನಿರ್ಧಾರ ಮಾಡಲಿದೆ.

ಉದಯಪುರದ 48 ವರ್ಷದ ವಿಪ್ಲವ್‌ ಕುಮಾರ್‌ ದೇವ್‌ ಹೆಸರು ಮುಂಚೂಣಿಯಲ್ಲಿದ್ದು, ಆರ್‌ಎಸ್‌ಎಸ್‌ ಒಡನಾಟ ಅವರ ನೆರವಿಗೆ ಬರಬಹುದು.

ಬುಡಕಟ್ಟು ವ್ಯಕ್ತಿಗೆ ಪಟ್ಟ?: ಆದರೆ, ಕಳೆದ 25 ವರ್ಷಗಳಿಂದ ತ್ರಿಪುರಾದಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯಾಗಿಲ್ಲ ಎಂಬ ವಿಷಯ ಪ್ರಧಾನವಾದರೆ, ದೇವ್‌ ಅವರಿಗೆ ಅವಕಾಶ ಕೈತಪ್ಪುವ ಸಾಧ್ಯತೆ ಇದೆ.

ಆಗ, ಬಿಜೆಪಿ ಉಪಾಧ್ಯಕ್ಷ ಹಾಗೂ ಬುಡಕಟ್ಟು ಜನಾಂಗದ ರಾಮಪದ ಜಮಾತಿಯಾ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯಬಹುದು.

*
ಎಡಪಕ್ಷಗಳ ಶಬ್ದಕೋಶದಲ್ಲಿ ಅಭಿವೃದ್ಧಿ ಎಂಬ ಪದವೇ ಇಲ್ಲ. ಹೀಗಾಗಿ 25 ವರ್ಷಗಳ ಎಡ ಪಕ್ಷದ ಆಡಳಿತದಲ್ಲಿ ತ್ರಿಪುರಾ ತೀರಾ ಹಿಂದುಳಿದಿದೆ.
–ವಿಪ್ಲವ್‌ ಕುಮಾರ್‌ ದೇವ್‌,
ತ್ರಿಪುರಾ ಬಿಜೆಪಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.