ADVERTISEMENT

ಪೊಲೀಸರ ಮೇಲೆ ಹಲ್ಲೆ: ರಜನಿ ಕಿಡಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 19:40 IST
Last Updated 11 ಏಪ್ರಿಲ್ 2018, 19:40 IST
ಪೊಲೀಸರ ಮೇಲೆ ಹಲ್ಲೆ: ರಜನಿ ಕಿಡಿ
ಪೊಲೀಸರ ಮೇಲೆ ಹಲ್ಲೆ: ರಜನಿ ಕಿಡಿ   

ಚೆನ್ನೈ: ಮಂಗಳವಾರ ಇಲ್ಲಿ ನಡೆದ ಐಪಿಎಲ್ ಪಂದ್ಯವನ್ನು (ಇಂಡಿಯನ್ ಪ್ರೀಮಿಯರ್ ಲೀಗ್) ವಿರೋಧಿಸಿ ಪ್ರತಿಭಟಿಸಿದ ಗುಂಪು ಪೊಲೀಸರ ಮೇಲೆ ದೌರ್ಜನ್ಯ ನಡೆಸಿದ್ದಕ್ಕೆ ನಟ ರಜನಿಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಮವಸ್ತ್ರ ತೊಟ್ಟು ಕರ್ತವ್ಯದಲ್ಲಿರುವ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಹಿಂಸೆಯ ಪರಾಕಾಷ್ಠೆ’ ಎಂದು ಅವರು ಬುಧವಾರ ಟ್ವೀಟ್ ಮಾಡಿದ್ದಾರೆ. ಹಲ್ಲೆಯ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ (ಸಿಎಂಬಿ) ರಚನೆಗೆ ಒತ್ತಾಯಿಸಿ ರಾಜ್ಯದಾದ್ಯಂತ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿರುವ ವೇಳೆ ಐಪಿಎಲ್ ಪಂದ್ಯ ಆಡಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನಕಾರರು ಮಂಗಳವಾರ ಬ್ಯಾರಿಕೇಡ್‌ಗಳನ್ನು ದಾಟಿ ಎಂ.ಎ. ಚಿದಂಬರಂ ಕ್ರೀಡಾಂಗಣಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ತಡೆದಿದ್ದರು. ಆಗ ಪೊಲೀಸರ ಮೇಲೆ ಹಲ್ಲೆ ನಡೆಯಿತು.

ADVERTISEMENT

‘ದೇಶಕ್ಕೆ ಮಾರಕವಾದ ಇಂಥ ಹಿಂಸೆಯನ್ನು ತಕ್ಷಣಕ್ಕೆ ತಡೆಯಬೇಕು. ಪೊಲೀಸರ ಮೇಲೆ ಹಲ್ಲೆ ನಡೆಸುವವರನ್ನು ಶಿಕ್ಷಿಸಲು ಇನ್ನಷ್ಟು ಕಠಿಣ ಕಾನೂನು ಬೇಕು’ ಎಂದು ರಜನಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಆದರೆ, ಟ್ವಿಟರ್‌ನಲ್ಲಿ ರಜನಿಕಾಂತ್ ಅವರ ನಿಲುವಿಗೆ ವಿರೋಧ ವ್ಯಕ್ತವಾಗಿದೆ. ರಜನಿ ಅವರು ತಮ್ಮ ಸಿನಿಮಾಗಳಲ್ಲಿ ಪೊಲೀಸರ ವಿರುದ್ಧ ಮಾತನಾಡಿರುವ ವಿಡಿಯೊಗಳನ್ನು ಕೆಲವರು ಹಂಚಿಕೊಂಡಿದ್ದಾರೆ.

ರಜನಿ ಪ್ರೇರಣೆ?: ರಜನಿಕಾಂತ್ ಅಭಿನಯದ, ಮಣಿರತ್ನಂ ನಿರ್ದೇಶನದ ‘ದಳಪತಿ’ ಚಿತ್ರದ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಪೊಲೀಸ್ ಸೂಪರಿಂಟೆಂಡೆಂಟ್ ಒಬ್ಬರ ಮೇಲೆ ರಜನಿ ಅವರು ಕೈ ಮಾಡಲು ಮುಂದಾದ ದೃಶ್ಯ ಈ ವಿಡಿಯೊದಲ್ಲಿದೆ. ಅನೇಕರು ವಿಡಿಯೊವನ್ನು ಮರುಟ್ವೀಟ್ ಮಾಡಿ, ‘ಮಂಗಳವಾರ ಹಿಂಸಾಚಾರಕ್ಕೆ ಇಳಿದ ಪ್ರತಿಭಟನಕಾರರಿಗೆ ರಜನಿ ಅವರೇ ಪ್ರೇರಣೆ ಆದರೇ’ ಎಂದು ಕುಟುಕಿದ್ದಾರೆ.

‘ಮಿಸ್ಟರ್ ರಜನಿಕಾಂತ್, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಪೊಲೀಸರು ನಡೆಸುವ ದೌರ್ಜನ್ಯದ ವಿರುದ್ಧ ನಿಮ್ಮಿಂದ ಒಂದು ಸೊಲ್ಲನ್ನೂ ನಾವು ಈವರೆಗೆ ಕೇಳಿಲ್ಲ. ನೀವೇಕೆ ಇಷ್ಟು ಪಕ್ಷಪಾತಿಯಾಗಿದ್ದೀರಿ, ಈ ದೌರ್ಬಲ್ಯವು ನಿಮ್ಮಲ್ಲಿ ಪಾಪಪ್ರಜ್ಞೆ ಉಂಟುಮಾಡುತ್ತಿಲ್ಲವೇ’ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಪುದುಚೇರಿ ಬಂದ್

ಪುದುಚೇರಿ: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಬುಧವಾರ ಇಲ್ಲಿ ಒಂದು ದಿನದ ಬಂದ್‌ ನಡೆಯಿತು. ಅಂಗಡಿಗಳು ಹಾಗೂ ಇತರ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

ಪತ್ತಳಿ ಮಕ್ಕಳ್ ಕಚ್ಚಿ (ಪಿಎಂಕೆ) ಬಂದ್‌ಗೆ ಕರೆ ನೀಡಿತ್ತು. ಆಡಳಿತಾರೂಢ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷ ಡಿಎಂಕೆ ಬಂದ್‌ಗೆ ಬೆಂಬಲ ಸೂಚಿಸಿದ್ದವು.

‘ಖಾಸಗಿ ಬಸ್ ಮತ್ತು ಆಟೊಗಳ ಸಂಚಾರ ವಿರಳವಾಗಿತ್ತು. ತಮಿಳುನಾಡಿನಿಂದ ಬರುವ ಸರ್ಕಾರಿ ಬಸ್‌ಗಳು ಕಾರ್ಯನಿರ್ವಹಿಸಿದವು. ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸಿದವು’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.