ADVERTISEMENT

ಪ್ರತಿಪಕ್ಷ ಪ್ರತಿಭಟನೆ, ಫತ್ವಾ ಮಧ್ಯೆ ದಾಖಲೆ ಸೂರ್ಯ ನಮಸ್ಕಾರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 9:30 IST
Last Updated 12 ಜನವರಿ 2012, 9:30 IST

ಭೋಪಾಲ್ (ಪಿಟಿಐ): ವಿರೋಧ ಪಕ್ಷಗಳ ಪ್ರತಿಭಟನೆ ಹಾಗೂ ಮುಸ್ಲಿಂ ಧರ್ಮಗುರುಗಳ ~ಫತ್ವಾ~ ಮಧ್ಯೆಯೇ ಮಧ್ಯಪ್ರದೇಶದಾದ್ಯಂತ ಶುಕ್ರವಾರ ನಡೆದ ~ಸೂರ್ಯ ನಮಸ್ಕಾರ~ ಯೋಗ ಕಾರ್ಯಕ್ರಮದಲ್ಲಿ ಸುಮಾರು 50 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡು ದಾಖಲೆ ನಿರ್ಮಿಸಿದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದರು.

ಈ ಕಾರ್ಯಕ್ರಮದ ಮೂಲಕ ಮಧ್ಯ ಪ್ರದೇಶ ಸರ್ಕಾರವು ಸಾಮೂಹಿಕ ಯೋಗ ಪ್ರದರ್ಶನದಲ್ಲಿ ~ವಿಶ್ವ ದಾಖಲೆ~ ನಿರ್ಮಾಣದ ಗುರಿ ಹೊಂದಿದೆ.

ಸ್ವಾಮಿ ವಿವೇಕಾನಂದರ ಜನ್ಮದಿನದ ಸಂದರ್ಭದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ನಡೆಸುವ ಕಾರ್ಯಕ್ರಮವನ್ನು ರಾಜ್ಯದಲ್ಲಿ 2007ರಿಂದ ನಡೆಸುತ್ತಾ ಬರಲಾಗುತ್ತಿದ್ದು ಈ ಬಾರಿಯ ಕಾರ್ಯಕ್ರಮವನ್ನು ದಾಖಲೆ ಮಟ್ಟದಲ್ಲಿ ಯಶಸ್ವಿಗೊಳಿಸಲು ಶಾಲಾ ಶಿಕ್ಷಣ ಇಲಾಖೆ ವ್ಯಾಪಕ ವ್ಯವಸ್ಥೆಗಳನ್ನು ಮಾಡಿತ್ತು.

ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ಸುಮಾರು 50 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಇದೇ ಒಂದು ದಾಖಲೆಯಾಗಿದೆ~ ಎಂದು ಅಧಿಕಾರಿಗಳು ಹೇಳಿದರು.

ಕಾರ್ಯಕ್ರಮ ನಡೆಸುವ ನಿರ್ಧಾರವನ್ನು ಪ್ರಬಲವಾಗಿ ಸಮರ್ಥಿಸಿದ ಚೌಹಾಣ್ ಅವರು ~ಸೂರ್ಯ ನಮಸ್ಕಾರ ಯಾವುದೇ ಒಂದು ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಇದು ದೇಹ ಮತ್ತು ಮನಸ್ಸಿನ ಸಮನ್ವಯಗೊಳಿಸುವ ಯೋಗ ವ್ಯಾಯಾಮವಾಗಿದ್ದು ವ್ಯಕ್ತಿಯನ್ನು ಸಂಪೂರ್ಣ ಸ್ವಸ್ಥನನ್ನಾಗಿ ಮಾಡುವ ಗುರಿ ಹೊಂದಿದೆ~ ಎಂದು ನುಡಿದರು.

ಏನಿದ್ದರೂ ಸೂರ್ಯನಮಸ್ಕಾರದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರಲಿಲ್ಲ. ಕಾರ್ಯಕ್ರಮವನ್ನು ಕೇವಲ ಗಿನ್ನೆಸ್ ದಾಖಲೆಯಲ್ಲಿ ದಾಖಲಾತಿ ಮಾಡುವ ಸಲುವಾಗಿ ಸಂಘಟಿಸಿದ್ದೂ ಅಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
 
ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡ ಸೂರ್ಯ ವಂದನೆಯ ಈ ಯೋಗ ಕಾರ್ಯಕ್ರಮವನ್ನು ಸಚಿವರು ವಿಭಾಗ ಮತ್ತು ಜಿಲ್ಲಾ ಮಟ್ಟಗಳಲ್ಲಿ ಸ್ವತಃ  ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದರು.

ಅಲ್ಪಸಂಖ್ಯಾತ ಸಮುದಾಯದ ಮುಖ್ಯಸ್ಥರು ಈ ಕಾರ್ಯಕ್ರಮವನ್ನು ಪ್ರಬಲವಾಗಿ ವಿರೋಧಿಸಿದ್ದರಲ್ಲದೆ ~ಫತ್ವಾ~ ಹೊರಡಿಸಿ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಜನರನ್ನು ನಿರ್ದೇಶಿಸಿದ್ದರು.
 
ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಕಾರ್ಯಕ್ರಮವನ್ನು ~ಆರ್ ಎಸ್ ಎಸ್ ನಾಯಕತ್ವವನ್ನು ಸಂತೃಪ್ತಿ ಪಡಿಸುವ ಪ್ರಯತ್ನ ಎಂಬುದಾಗಿ ಬಣ್ಣಿಸಿತ್ತು. ಇದು ಕೇಸರೀಕರಣ ಅಜೆಂಡಾದ ಒಂದು ಭಾಗ ಎಂದೂ ಟೀಕಿಸಿತ್ತು.

ಈಸಾಯಿ ಮಹಾಸಂಘವು ಸರ್ಕಾರದ ಕ್ರಮವನ್ನು ಸಂವಿಧಾನ ವಿರೋಧಿ ಎಂಬುದಾಗಿ ಬಣ್ಣಿಸಿ ಹೇಳಿಕೆ ನೀಡಿ, ಸರ್ಕಾರಿ ಪ್ರೇಷಿತ ಸೂರ್ಯ ನಮಸ್ಕಾರವನ್ನು ತನ್ನ ದಾಖಲೆಗಳಲ್ಲಿ ಸೇರಿಸದಂತೆ  ಗಿನ್ನೆಸ್ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿತ್ತು. ಈ ಕಾರ್ಯಕ್ರಮವು ಬಹುಧರ್ಮಗಳ ಸಮಾಜದಲ್ಲಿ ಕೋಮು ಅಸಹನೆ ಉಂಟು ಮಾಡುವ ಗುರಿ ಹೊಂದಿದೆ ಎಂಬುದರತ್ತ ಗಿನ್ನೆಸ್ ಅಧಿಕಾರಿಗಳ ಗಮನ ಸೆಳೆಯುವುದಾಗಿಯೂ ಅದು ಹೇಳಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.