ನವದೆಹಲಿ: ಕೇಂದ್ರ ಸರ್ಕಾರ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕು ಎಂಬ ಒತ್ತಾಯವೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದ ರೈತರು ಬುಧವಾರ ನಡೆಸಲು ಉದ್ದೇಶಿಸಿದ್ದ ‘ರಾಜಧಾನಿ ರಸ್ತೆ ಬಂದ್’ ಚಳವಳಿಯನ್ನು ಪ್ರಧಾನಿ ಭರವಸೆ ಹಿನ್ನೆಲೆಯಲ್ಲಿ ಹಿಂತೆಗೆದುಕೊಂಡಿದ್ದಾರೆ.
‘ಕರ್ನಾಟಕ ರಾಜ್ಯ ರೈತ ಸಂಘ’ ಹಾಗೂ ‘ಭಾರತೀಯ ಕಿಸಾನ್ ಯೂನಿಯನ್’ (ಬಿಕೆಯು) ಮುಖಂಡರು ಮಂಗಳವಾರ ಪ್ರಧಾನಿ ಮನಮೋಹನ್‌ಸಿಂಗ್ ಅವರ ಜತೆ ನಡೆಸಿದ ಮಾತುಕತೆ ಬಳಿಕ ಚಳವಳಿ ಹಿಂದಕ್ಕೆ ಪಡೆಯಲಾಯಿತು ಎಂದು ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಬುಧವಾರ ಜಂತರ್ ಮಂತರ್ ಬಳಿ ರೈತರು ಪ್ರತಿಭಟನೆಗೆ ಬದಲಾಗಿ ಬೃಹತ್ ಸಭೆ ನಡೆಸಲಿದ್ದಾರೆ.ವಿಶೇಷ ಆರ್ಥಿಕ ವಲಯಕ್ಕೆ ಕೃಷಿ ಜಮೀನನ್ನು ಬಲವಂತವಾಗಿ ವಶಪಡಿಸಿಕೊಳ್ಳಬಾರದು. ರೈಲು, ಆಸ್ಪತ್ರೆ ಮುಂತಾದ ಅತ್ಯಗತ್ಯ ಯೋಜನೆಗಳಿಗೆ ಸ್ವಾಧೀನ ಮಾಡಿಕೊಳ್ಳುವ ಜಮೀನಿಗೆ ಮಾರುಕಟ್ಟೆ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಪರಿಹಾರ ಕೊಡಬೇಕು.
ಬೆಳೆ ವಿಮೆಗೆ ಹೋಬಳಿ ಬದಲಾಗಿ ಹಳ್ಳಿಗಳನ್ನು ಘಟಕಗಳೆಂದು ಪರಿಗಣಿಸಬೇಕು. ರೈತರನ್ನು ಆರೋಗ್ಯ ವಿಮೆ ವ್ಯಾಪ್ತಿಗೆ ತರಬೇಕು.
ಕೃಷಿಕರಿಗೂ ಕನಿಷ್ಠ ವೇತನ ಜಾರಿಗೊಳಿಸಬೇಕು. ಕುಲಾಂತರಿ ಬೀಜ ನಿಷೇಧಿಸಬೇಕು ಎಂಬ ಬೇಡಿಕೆಗಳನ್ನು ರೈತ ನಿಯೋಗ ಪ್ರಧಾನಿ ಮುಂದಿಟ್ಟಿತು.
ರೈತ ಮುಖಂಡರ ಮಾತನ್ನು ತಾಳ್ಮೆಯಿಂದ ಆಲಿಸಿದ ಮನಮೋಹನ್‌ಸಿಂಗ್ ಎಲ್ಲ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವ ಆಶ್ವಾಸನೆ ನೀಡಿದರು.
ಈ ಸಂಬಂಧ ಸದ್ಯವೇ ರೈತ ಮುಖಂಡರ ಸಭೆ ಕರೆಯುವುದಾಗಿ ಸ್ಪಷ್ಟಪಡಿಸಿದರು.ಪ್ರಧಾನಿ ಅವರನ್ನು ಭೇಟಿಯಾದ ನಿಯೋಗದಲ್ಲಿ ಮುಖಂಡರಾದ ಪುಟ್ಟಣ್ಣಯ್ಯ, ಯದುವೀರ್ ಸಿಂಗ್, ಚಾಮರಸಮಾಲಿ ಪಾಟೀಲ್, ದೇವೇಂದರ್, ಬೂದನೂರು ಶಿವರಾಂ, ಬಡಗಲಪುರ ನಾಗೇಂದ್ರ ಮತ್ತು ಸಿ. ಪುಟ್ಟಸ್ವಾಮಿ ಮೊದಲಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.