ADVERTISEMENT

ಪ್ರಾಣಾಂತಿಕ ‘ಮಾಂಜಾ’ ನಿಷೇಧ

ಪಿಟಿಐ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
ಪ್ರಾಣಾಂತಿಕ ‘ಮಾಂಜಾ’ ನಿಷೇಧ
ಪ್ರಾಣಾಂತಿಕ ‘ಮಾಂಜಾ’ ನಿಷೇಧ   

ನವದೆಹಲಿ: ನೈಲಾನ್ ಅಥವಾ ಸಿಂಥೆಟಿಕ್ ವಸ್ತುಗಳಿಂದ ತಯಾರಿಸಿದ ‘ಮಾಂಜಾ’ (ಗಾಳಿಪಟಗಳಿಗೆ ಬಳಸುವ ದಾರ) ಬಳಕೆಗೆ ರಾಷ್ಟ್ರೀಯ ಹಸಿರು ಪೀಠ ಸಂಪೂರ್ಣ ನಿಷೇಧ ಹೇರಿದೆ.

ಮಣ್ಣಿನಲ್ಲಿ ಕೊಳೆಯದ ಇಂಥ ದಾರಗಳು ಪ್ರಾಣಿ–ಪಕ್ಷಿಗಳು ಮತ್ತು ಮನುಷ್ಯರ ಜೀವಕ್ಕೇ ಅಪಾಯ ಒಡ್ಡುವುದರಿಂದ ನಿಷೇಧಿಸಲಾಗಿದೆ. ನಿಷೇಧವು ನೈಲಾನ್, ಗಾಜಿನ ಪುಡಿ ಲೇಪಿತ ಚೀನೀ ಮತ್ತು ಹತ್ತಿ ಮಾಂಜಾಗಳಿಗೆ ಅನ್ವಯಿಸುತ್ತದೆ ಎಂದು ಪೀಠವು ಸ್ಪಷ್ಟಪಡಿಸಿದೆ.

ಎಲ್ಲಾ ಬಗೆಯ ಸಿಂಥೆಟಿಕ್ ಮಾಂಜಾ ಅಥವಾ ನೈಲಾನ್ ದಾರಗಳ ಉತ್ಪಾದನೆ, ಮಾರಾಟ, ಸಂಗ್ರಹ, ಖರೀದಿ ಮತ್ತು ಬಳಕೆಯನ್ನು ನಿಷೇಧಿಸುವಂತೆ ಹಸಿರು ಪೀಠದ ಅಧ್ಯಕ್ಷ, ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರಿರುವ ಪೀಠವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

ADVERTISEMENT

‘ಮಾಂಜಾಗಳಿಂದಾಗಿ ಅನೇಕ ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಇವು ಪ್ರಾಣಿ–ಪಕ್ಷಿಗಳ ಜೀವಕ್ಕೆ ಗಂಭೀರ ಅಪಾಯ ಒಡ್ಡುತ್ತಿವೆ’ ಎಂದು ‘ಪೆಟಾ’ದ ಖಾಲಿದ್ ಅಶ್ರಫ್‌ ಮತ್ತು ಇತರರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

‘ಗಾಳಿಪಟ ಕಿತ್ತುಹೋದ ದಾರಗಳು ವಿದ್ಯುತ್ ತಂತಿಗಳಿಗೆ ಸಿಕ್ಕಿಕೊಳ್ಳುತ್ತವೆ. ಈ ದಾರಗಳು ವಿದ್ಯುತ್ ಪ್ರವಾಹಕಗಳಾಗಿ ವರ್ತಿಸುತ್ತವೆ. ಜೀವಿಗಳು ದಾರದ ಸಂಪರ್ಕಕ್ಕೆ ಬಂದಾಗ ಪ್ರಾಣಹಾನಿ ಆಗುವ ಸಾಧ್ಯತೆ ಇರುತ್ತದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

‘ಮಾಂಜಾಗಳನ್ನು ತಯಾರಿಸುವ ಉದ್ಯಮಗಳಲ್ಲಿ ಬಾಲಕಾರ್ಮಿಕರನ್ನು ಬಳಸಲಾಗುತ್ತದೆ. ಅಲ್ಲಿ ಅವರು ಹಾನಿಕಾರಕ ಪದಾರ್ಥಗಳು ಸೇರಿರುವ ಗಾಳಿ ಉಸಿರಾಡುವ ಕಾರಣ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ’ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.