ADVERTISEMENT

ಪ್ರಾಣ್‌ಗೆ ಫಾಲ್ಕೆ ಗೌರವ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಖಡಕ್ ಮಾತಿನ ಮೂಲಕ ಖಳನಾಯಕನ ಪಾತ್ರಕ್ಕೆ ವಿಶೇಷ ಖದರು ತಂದುಕೊಟ್ಟ ಬಾಲಿವುಡ್ ಹಿರಿಯ ನಟ ಪ್ರಾಣ್ ಸಿಕಂದ್ ಅವರನ್ನು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

93 ವರ್ಷದ ಪ್ರಾಣ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದನ್ನು ಪುತ್ರ ಸುನೀಲ್ ಸಿಕಂದ್ ಸ್ವಾಗತಿಸಿದ್ದಾರೆ.

ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಪ್ರಾಣ್ ಅವರಿಗೆ ಮೇ 3ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಅದೇ ದಿನ ಭಾರತೀಯ ಸಿನಿಮಾರಂಗ ಶತಮಾನೋತ್ಸವ ಆಚರಿಸಿಕೊಳ್ಳಲಿದೆ.

ಆರು ದಶಕಗಳ ಸುದೀರ್ಘ ವೃತ್ತಿ ಜೀವನದಲ್ಲಿ ಪ್ರಾಣ್, 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1998ರ ಬಳಿಕ ಅವರು ನಟನೆಯಿಂದ  ದೂರ ಸರಿದರು.

1940ರಲ್ಲಿ `ಯಮಲಾ ಜಟ್' ಚಿತ್ರದ ಮೂಲಕ ವೃತ್ತಿಜೀವನ ಆರಂಭಿಸಿದರೂ, `ಮಿಲನ್', `ಮಧುಮತಿ' ಮತ್ತು `ಕಾಶ್ಮೀರ್ ಕೀ ಕಲಿ' ಚಿತ್ರಗಳಲ್ಲಿನ ಅವರ ನಟನೆ ಖ್ಯಾತಿ ತಂದುಕೊಟ್ಟಿತ್ತು. ಅವರು ಖಳನಾಯಕನ ಪಾತ್ರಕ್ಕೆ ಎಷ್ಟು ಜನಪ್ರಿಯತೆ ತಂದುಕೊಟ್ಟರು ಅಂದರೆ, ಪೋಷಕರು ತಮ್ಮ ಮಕ್ಕಳಿಗೆ `ಪ್ರಾಣ್' ಹೆಸರಿಡುವುದನ್ನೇ ನಿಲ್ಲಿಸಿದರು.

ಅಮಿತಾಬ್ ಬಚ್ಚನ್ ನಾಯಕರಾಗಿದ್ದ `ಜಂಜೀರ್', `ಉಪಕಾರ್' ಮತ್ತು `ಪರಿಚಯ್' ಚಿತ್ರಗಳಲ್ಲಿ ಕ್ರಮವಾಗಿ ಒಬ್ಬ ಗೆಳೆಯ, ತಂದೆ ಮತ್ತು ತಾತನಾಗಿ ಗುಣಾತ್ಮಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸೈ ಅನಿಸಿಕೊಂಡವರು ಪ್ರಾಣ್. `ಪ್ರಶಸ್ತಿ ಬಂದದ್ದಕ್ಕೆ ನಮಗೆ ಬಹಳ ಸಂತೋಷವಾಗಿದೆ. ಇದಕ್ಕಿಂತ ಹೆಚ್ಚಿನದೇನೂ ಹೇಳಲಾರೆ' ಎಂದು ಸುನೀಲ್  ಪ್ರತಿಕ್ರಿಯಿಸಿದರು.

ಪ್ರಾಣ್ ಪರಿಚಯ: 1920ರ ಫೆಬ್ರುವರಿ 12ರಂದು ಹಳೆಯ ದೆಹಲಿಯಲ್ಲಿ ಜನನ. ಕಪುರ್‌ತಲಾ, ಉನ್ನಾವ್, ಮೀರತ್, ಡೆಹ್ರಾಡೂನ್ ಹಾಗೂ ರಾಂಪುರದಲ್ಲಿ ಶಿಕ್ಷಣ. ತಂದೆ ಲಾಲಾ ಕೇವಲ್ ಕೃಷ್ಣ ಸರ್ಕಾರಿ ಕೆಲಸದಲ್ಲಿ ಇದ್ದ ಕಾರಣ ಊರಿಂದ ಊರಿಗೆ ಅಲೆದಾಟ.

ಪ್ರಾಣ್ ಅವರು ಆರಂಭದಲ್ಲಿ ತಾವೊಬ್ಬ ಛಾಯಾಗ್ರಾಹಕನಾಗಬೇಕು ಎಂದು ಹಂಬಲಿಸಿದ್ದರು. ಆದರೆ ಚಿತ್ರನಿರ್ಮಾಪಕರೊಬ್ಬರ ಮೂಲಕ ಬಣ್ಣದ ಬದುಕು ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.