ADVERTISEMENT

ಬಡ್ತಿ, ವೇತನ ಏರಿಕೆಗೆ ಸಂಶೋಧನೆ ಕಡ್ಡಾಯವಲ್ಲ

ಸಹಾಯಕ ಪ್ರಾಧ್ಯಾಪಕರ ‍ನೇಮಕಾತಿ ನಿಯಮ ಪರಿಷ್ಕರಿಸಿದ ಯುಜಿಸಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST

ನವದೆಹಲಿ: ಬಡ್ತಿ ಮತ್ತು ವೇತನ ಹೆಚ್ಚಳಕ್ಕೆ ಕಾಲೇಜು ಪ್ರಾಧ್ಯಾಪಕರು ಸಂಶೋಧನೆ ನಡೆಸುವುದು ಕಡ್ಡಾಯ ಎಂಬ ನಿಯಮವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಪ್ರಾಧ್ಯಾಪಕರು ತಮ್ಮ ಕಾಲೇಜುಗಳಲ್ಲಿ ಬೋಧನೆ ಮತ್ತು ವಿದ್ಯಾರ್ಥಿಕೇಂದ್ರಿತ ಚಟುವಟಿಕೆಗಳಲ್ಲಿ ಗಮನ ಕೇಂದ್ರೀಕರಿಸಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ನಿಯಮಗಳಲ್ಲಿ ಬದಲಾವಣೆ ತಂದಿದೆ. ಆದರೆ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಬಡ್ತಿ ಮತ್ತು ವೇತನ ಹೆಚ್ಚಳಕ್ಕಾಗಿ ಸಂಶೋಧನೆ ನಡೆಸುವುದು ಕಡ್ಡಾಯವಾಗಿದೆ. ಜತೆಗೆ, ಬೋಧನೆ ಹಾಗೂ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು. 

2020–21ನೇ ಶೈಕ್ಷಣಿಕ ವರ್ಷದ ಬಳಿಕ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗು ವವರಿಗೆ ಪಿಎಚ್‌.ಡಿ ಕಡ್ಡಾಯ ಅರ್ಹತೆಯಾಗಿರುತ್ತದೆ. ಬೋಧನೆಯ ಅರ್ಹತೆಗಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ನೆಟ್‌) ಪಡೆದುಕೊಂಡ ಅಂಕಗಳನ್ನು ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.  ಆದರೆ, ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ನೇಮಕ ಮತ್ತು ಕಿರಿಯ ಸಂಶೋಧನಾ ಫೆಲೋಶಿಫ್‌ಗೆ ನೆಟ್‌ ಅಂಕಗಳನ್ನು ಪರಿಗಣಿಸಲಾಗುವುದು.

ADVERTISEMENT

ಪಿಎಚ್‌.ಡಿ ಪದವಿ ಹೊಂದಿರುವವರು ಯಾವುದೇ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಹೊಂದಿರುತ್ತಾರೆ. ಅಂಥವರು ನೆಟ್‌ ಉತ್ತೀರ್ಣರಾಗುವ ಅಗತ್ಯ ಇಲ್ಲ.

ನೆಟ್‌ ಅಂಕಗಳ ಆಧಾರದಲ್ಲಿ ಯಾವುದೇ ವಿಶ್ವವಿದ್ಯಾಲಯಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಆಗಬಹುದು. ಆದರೆ, ಬಳಿಕ ಬಡ್ತಿ ಅಥವಾ ವೇತನ ಹೆಚ್ಚಳಕ್ಕೆ ಪಿಎಚ್‌.ಡಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಹೊಸ ನಿಯಮ ಹೇಳುತ್ತಿದೆ.

‘ಸ್ವಯಂ’ಗೆ ಮನ್ನಣೆ

ಸರ್ಕಾರ ಆರಂಭಿಸಿರುವ ಮುಕ್ತ ಮತ್ತು ಆನ್‌ಲೈನ್‌ ಕೋರ್ಸ್‌ನ ‘ಸ್ವಯಂ’ ಅಂತರ್ಜಾಲ ತಾಣದಲ್ಲಿ ಸ್ವಯಂಪ್ರೇರಿತರಾಗಿ ಬೋಧನೆ ಮಾಡುವವರಿಗೆ ‘ಕೃಪಾಂಕ’ ದೊರೆಯಲಿದೆ. ಇದನ್ನು ಬಡ್ತಿಗೂ ಪರಿಗಣಿಸಲಾಗುವುದು.

ಹೊಸದಾಗಿ ನೇಮಕವಾಗುವವರಿಗೆ ಒಂದು ತಿಂಗಳ ಸೇರ್ಪಡೆ ತರಬೇತಿ ಕಡ್ಡಾಯ

ಶೈಕ್ಷಣಿಕ ಕಾರ್ಯಕ್ಷಮತೆ ಸೂಚಕ (ಎಪಿಐ) ವ್ಯವಸ್ಥೆ ರದ್ದು

ಹೊಸ, ಸರಳೀಕೃತ ಬೋಧನೆ ಮೌಲ್ಯಮಾಪನ ಶ್ರೇಣಿ ವ್ಯವಸ್ಥೆ ಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.